ಚನ್ನಮ್ಮ ಹಾಗೂ ರಾಯಣ್ಣ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಯಾವುದೇ ಒಂದು ಜಾತಿಗೆ ಸೀಮಿತವಾಗಿ ಹೋರಾಡಿದವರಲ್ಲ ಇಡೀ ದೇಶಕ್ಕಾಗಿ ತ್ಯಾಗ ಮಾಡಿದವರು.

ಗದಗ: ಇಂದು ಸಮಾಜಗಳು ವೈಯಕ್ತಿಕ ಪೀಠಗಳು ಹಾಗೂ ಟ್ರಸ್ಟ್‌ಗಳನ್ನು ಕಟ್ಟಿಕೊಂಡು ರಾಜಕಾರಣಿಗಳ ಕೈಗೆ ಸಿಲುಕಿ, ಜಾತಿಗಳ ನಡುವೆ ಒಡಕು ಮೂಡಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜಗಳನ್ನು ಒಗ್ಗೂಡಿಸುವ ಕಾರ್ಯಗಳು ನಡೆಯಬೇಕಿದೆ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹಾಗೂ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಹೇಳಿದರು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಿಲ್ಲಾ ಕುರುಬ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮನವರ 248 ನೇ ಜಯಂತಿ ಹಾಗೂ 202 ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚನ್ನಮ್ಮ ಹಾಗೂ ರಾಯಣ್ಣ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಯಾವುದೇ ಒಂದು ಜಾತಿಗೆ ಸೀಮಿತವಾಗಿ ಹೋರಾಡಿದವರಲ್ಲ ಇಡೀ ದೇಶಕ್ಕಾಗಿ ತ್ಯಾಗ ಮಾಡಿದವರು. ಕುರುಬ ಸಮಾಜದ ಯುವಕರು ಪಂಚಮಸಾಲಿ ಸಮುದಾಯವನ್ನು ಒಟ್ಟಾಗಿ ಕರೆದೊಯ್ದು ಈ ಇಬ್ಬರು ಮಹನೀಯರ ಜಯಂತಿಯನ್ನು ಜಂಟಿಯಾಗಿ ಆಚರಿಸುತ್ತಿರುವುದು ಮಾದರಿ ನಡವಳಿಕೆ. ಮುಂದಿನ ದಿನಗಳಲ್ಲೂ ಎಲ್ಲ ಸಮುದಾಯಗಳು ಒಗ್ಗೂಡಿ ಇಂತಹ ಐತಿಹಾಸಿಕ ನಾಯಕರ ಜಯಂತಿಗಳನ್ನು ಆಚರಿಸಬೇಕು ಎಂದರು.

ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ತ್ಯಾಗ-ಬಲಿದಾನಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ನಡುವಿನ ತಾಯಿ ಮಗನ ಪವಿತ್ರ ಬಾಂಧವ್ಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಆದರ್ಶಗಳ ಮೇಲೆ ನಾವು ಸುಸಂಸ್ಕೃತ ಸಮಾಜ ನಿರ್ಮಿಸಬೇಕಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದು ಪಲ್ಲೇದ ಮಾತನಾಡಿ, ಕುರುಬ ಮತ್ತು ಪಂಚಮಸಾಲಿ ಎರಡೂ ಪ್ರಮುಖ ಸಮಾಜಗಳು. ರಾಜಕೀಯ ಮೇಲಾಟಗಳಿಗೆ ಬಲಿಯಾಗದೆ, ಸೌಹಾರ್ದತೆಯಿಂದ ಮುನ್ನಡೆಯೋಣ ಎಂದರು.

ಇದೇ ಸಂದರ್ಭದಲ್ಲಿ ಪ್ರೊ. ಕೆ.ಎ. ಬಳಿಗೇರ ಅವರು ಚನ್ನಮ್ಮ ಹಾಗೂ ರಾಯಣ್ಣ ಅವರ ಜೀವನ ಕುರಿತು ಉಪನ್ಯಾಸ ನೀಡಿದರು. ಪಂಚಮಸಾಲಿ ಸಮಾಜದ ಮುಖಂಡರಾದ ಶಾಂತಣ್ಣ ಮಾಳವಾಡ, ಈರಣ್ಣ ಕರಭಿಷ್ಠಿ, ಉತ್ಸವ ಸಮಿತಿ ಅಧ್ಯಕ್ಷ ವೀರಣ್ಣ ಮೇಟಿ, ಸಂಗಮೇಶ ಕವಳಿಕಾಯಿ, ಬಿ.ಬಿ. ಸೂರಪ್ಪಗೌಡರ, ಅಯ್ಯಪ್ಪ ಅಂಗಡಿ, ಬಸವರಾಜ ಗಡ್ಡೆಪ್ಪನವರ ಹಾಗೂ ಸ್ವಾತಿ ಅಕ್ಕಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಾಗರಾಜ ಮೆಣಸಗಿ, ಪ್ರಕಾಶ ಕರಿ, ನಾಗಪ್ಪ ಗುಗ್ಗರಿ, ಚನ್ನಮ್ಮ ಹುಳಕಣ್ಣವರ, ಆಯೋಜಕರಾದ ಹೇಮಂತ ಗಿಡ್ಡಹನುಮಣ್ಣವರ, ಮುತ್ತು ಜಡಿ, ಸತೀಶ ಗಿಡ್ಡಹನುಮಣ್ಣವರ ಮೊದಲಾದವರು ಉಪಸ್ಥಿತರಿದ್ದರು. ಪ್ರೊ. ಮಾರುತಿ ಮಡ್ಡಿ ಸ್ವಾಗತಿಸಿದರು, ಬಸವರಾಜ ಶೆಲಿಯಪ್ಪನವರ ನಿರೂಪಿಸಿದರು. ಗುತ್ತಿಗೆದಾರ ನಾಗರಾಜ ಮಾಗಡಿ ಕ್ರಾಂತಿಗೀತೆಗಳನ್ನು ಹಾಡಿದರು. ಇದಕ್ಕೂ ಮುನ್ನ ಶ್ರೀಗುರೂಜಿ ಇವೆಂಟ್ಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.