ನಗರದ ಜಲಾಶಯ ಬಡಾವಣೆಯ ನಾಗರಿಕರ ಬಹು ಕಾಲದ ಕೋರಿಕೆಯಾಗಿದ್ದ 50 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿದ ಕಾಮಗಾರಿಯನ್ನು ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಲೋಕಾರ್ಪಣೆ ಮಾಡಿದರು.

ಮಡಿಕೇರಿ: ನಗರದ ಜಲಾಶಯ ಬಡಾವಣೆಯ ನಾಗರಿಕರ ಬಹು ಕಾಲದ ಕೋರಿಕೆಯಾಗಿದ್ದ 50 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿದ ಕಾಮಗಾರಿಯನ್ನು ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಲೋಕಾರ್ಪಣೆ ಮಾಡಿದರು. ಗೌಳಿಬೀದಿ ನೂತನ ಕಾಂಕ್ರಿಟ್ ರಸ್ತೆ, ಭಗವತಿ ನಗರದ ಮೂಲಕ ಅಬ್ಬಿಫಾಲ್ಸ್‌ಗೆ ಹೋಗುವ ಕಾಂಕ್ರೀಟ್ ರಸ್ತೆ ಕಾಮಗಾರಿ ಉದ್ಘಾಟಿಸಿದರು. ಮುಖ್ಯಮಂತ್ರಿ ಅವರ ವಿಶೇಷ ಅನುದಾನದಲ್ಲಿ 3.5 ಕೋಟಿ ರು.ವನ್ನು ಮಡಿಕೇರಿ ನಗರದ ಬಡಾವಣೆಗಳ ಅಭಿವೃದ್ಧಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಒದಗಿಸಿ ಮಡಿಕೇರಿಯನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿಸಲು ಪ್ರಯತ್ನ ಪಡುವುದಾಗಿ ಡಾ. ಮಂತರ್ ಗೌಡ ಭರವಸೆ ನೀಡಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಮಾತನಾಡಿ, 2018ರ ಪ್ರಕೃತಿ ವಿಕೋಪ ಆದಲ್ಲಿಂದ ಜಲಾಶಯ ಬಡಾವಣೆಯ ನಿವಾಸಿಗಳು ಭೂ ಕುಸಿತದ ಆತಂಕದಿಂದಲೇ ಇದ್ದು, ತಮ್ಮ ಬಡಾವಣೆ ರಕ್ಷಣೆಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ದೊಡ್ಡ ಮೊತ್ತದ ಕಾಮಗಾರಿಯಾದ್ದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ಈ ಅಪಾಯಕಾರಿ ಪ್ರದೇಶವನ್ನು ವೀಕ್ಷಿಸಿದ ಶಾಸಕರು ಅನುದಾನದ ಭರವಸೆ ನೀಡಿದ್ದರು. ಈಗ 50 ಲಕ್ಷ ರು. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಿ ಬಡಾವಣೆ ನಿವಾಸಿಗಳು ನಿರಾಳಾಗಿರುವಂತೆ ಮಾಡಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ವಾರ್ಡ್ ನಗರಸಭೆ ಸದಸ್ಯೆ ಉಷಾ ಕಾವೇರಪ್ಪ, ನಗರಸಭೆ ಆಯುಕ್ತ ಎಚ್.ಆರ್. ರಮೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್, ಕಿರಿಯ ಎಂಜಿನಿಯರ್ ಹೇಮಕುಮಾರ್, ಪ್ರಕಾಶ್ ಆಚಾರ್ಯ, ಪ್ರಮುಖರಾದ ಪುಷ್ಪ ಪೂಣಚ್ಚ, ಜಿ.ಸಿ. ಜಗದೀಶ್, ಮುದ್ದುರಾಜ್, ಅಂಬೇಕಲ್ ಕುಶಾಲಪ್ಪ, ಕಾವೇರಪ್ಪ, ಅಂಬೇಕಲ್ ನವೀನ್, ಜೀವನ್, ಕೋಚನ ಹರಿ ಪ್ರಸಾದ್, ವಿ.ಜಿ. ಮೋಹನ್, ಫ್ಯಾನ್ಸಿ ಪಾರ್ವತಿ, ಶಶಿಕಲಾ, ಕೋಚನ ಚೇತನ್, ರಾಜು, ಅರ್ಜುನ್ ಸೇರಿದಂತೆ ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.