ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಮತಯಾಚನೆ ನಡೆಸಿದರು.ಸೊಕ್ಕೆ ಗ್ರಾಮಕ್ಕೆ ವಿನಯ್ ಕುಮಾರ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು. ಕಹಳೆ ಊದುತ್ತಾ, ಡೋಲು, ತಮಟೆ ಬಾರಿಸುತ್ತಾ ಮೆರವಣಿಗೆ ನಡೆಸಲಾಯಿತು.
ಕೆಲವರು ವಿನಯ್ ಕುಮಾರ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಜೊತೆಗೆ ಕುರಿ ನೀಡಿದರು. ಈ ವೇಳೆ ವಿನಯ್ ಕುಮಾರ್ ಕುರಿಯನ್ನು ಹೆಗಲ ಮೇಲಿಟ್ಟುಕೊಂಡಿದ್ದು ಗಮನ ಸೆಳೆಯಿತು. ಜೈಕಾರಗಳು ಮುಗಿಲು ಮುಟ್ಟಿದವು.ಈ ವೇಳೆ ಮಾತನಾಡಿದ ವಿನಯ್ ಕುಮಾರ್, ಜಗಳೂರು ತಾಲೂಕು ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊತ್ತಿದೆ. ಈ ತಾಲೂಕನ್ನು ಹಸಿರನಾಡಾಗಿಸಲು, ನೀರಾವರಿ ಯೋಜನೆಗಳು ಇದುವರೆಗೆ ಕಾರ್ಯಗತಗೊಂಡಿಲ್ಲ. ಇಷ್ಟು ವರ್ಷ ಅಧಿಕಾರ ನಡೆಸಿದವರು ಜನರಿಗೆ ಭರವಸೆ ನೀಡಿ ವಂಚಿಸುತ್ತಲೇ ಬಂದಿದ್ದಾರೆ. ಕೆರೆಗಳಿಗೆ ನೀರುಣಿಸುವ ಯೋಜನೆಯು ಸಮರ್ಪಕವಾಗಿ ನಡೆದಿಲ್ಲ, ಈ ಕಾಮಗಾರಿಯಲ್ಲಿ ಮಂದಗತಿಯಲ್ಲಿ ಸಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಇದು ನನ್ನ ಗಮನಕ್ಕೆ ಬಂದಿದೆ. ಜಗಳೂರು ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಎಲ್ಲಾ ರೀತಿಯಲ್ಲಿಯೂ ಶ್ರಮಿಸುತ್ತೇನೆ. ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಜಗಳೂರು ತಾಲೂಕಿನಲ್ಲಿ ಹೆಚ್ಚಾಗಿ ಹಿಂದುಳಿದವರೇ ಇದ್ದಾರೆ. ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ದೊರೆತಿಲ್ಲ. ಹೈಟೆಕ್ ಶಾಲೆಗಳಿಲ್ಲ. ಎಲ್ಲಾ ಸೌಲಭ್ಯಗಳು ಇರುವಂಥ ಕಾಲೇಜುಗಳಿಲ್ಲ. ಹಾಗಾಗಿ, ಜಗಳೂರು ತಾಲೂಕಿನ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳು ದಾವಣಗೆರೆಗೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ. ಜಗಳೂರು ತಾಲೂಕಿನ ಎಷ್ಟೋ ಹಳ್ಳಿಗಳಿಗೆ ಇದುವರೆಗೂ ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಇದರಿಂದ ವಿದ್ಯಾರ್ಥಿನಿಯರು ಓದು ನಿಲ್ಲಿಸಿರುವ ವಿಚಾರವೂ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.ಮೆಕ್ಕೆಜೋಳ ಕೋಲ್ಡ್ ಸ್ಟೋರೇಜ್ ಸಹ ಇಲ್ಲಿ ಅತ್ಯವಶ್ಯಕವಾಗಿ ಬೇಕು. ರೈತಾಪಿ ವರ್ಗವೂ ತುಂಬಾನೇ ಕಷ್ಟದಲ್ಲಿದೆ. ಈ ವರ್ಷ ಬರಗಾಲ ತಲೆದೋರಿರುವುದರಿಂದ ರೈತರ ಸಮಸ್ಯೆ ಅರ್ಥವಾಗುತ್ತದೆ. ಇಷ್ಟೊಂದು ವರ್ಷಗಳ ಕಾಲ ಅಧಿಕಾರದಲ್ಲಿದ್ದವರು ಯಾಕೆ ಈ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿಲ್ಲ ಎಂಬುದು ಸಾಮಾನ್ಯವಾಗಿ ಕಾಡುವ ಪ್ರಶ್ನೆ. ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ಆಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ವಿನಯ್ ಕುಮಾರ್ ತಿಳಿಸಿದರು.