ಸಾರಾಂಶ
ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಇಂದಿನಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ 3 ಸಾವಿರ ಯುವಕರು ರಾಮನ ಟ್ಯಾಟೋ ಹಾಕಿಸಿಕೊಳ್ಳಲು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಇಂದಿನಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ 3 ಸಾವಿರ ಯುವಕರು ರಾಮನ ಟ್ಯಾಟೋ ಹಾಕಿಸಿಕೊಳ್ಳಲು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. 10 ಸಾವಿರ ಯುವಕರು ಬರುವ ನಿರೀಕ್ಷೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3 ಸಾವಿರ ಯುವಕರು ರಾಮನ ಟ್ಯಾಟೋ ಚಿತ್ರ ಹಾಕಿಸಿಕೊಳ್ಳಲು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. 30 ರಿಂದ 40 ಜನ ಕಾರ್ಯಕರ್ತರು ಟ್ಯಾಟೋ ತೆಗೆಯುತ್ತಾರೆ.
ಇವತ್ತು ಸಾಂಕೇತಿಕವಾಗಿ ನಮ್ಮ ಕಾರ್ಯಾಲಯದಲ್ಲಿ ಅಭಿಯಾನವನ್ನು ಪ್ರಾರಂಭ ಮಾಡಿದ್ದೇವೆ. ಜ.21ವರೆಗೂ ರಾಮನ ಟ್ಯಾಟೋ ಬಿಡಿಸಲಾಗುವುದು.
ಜ.17 ರಿಂದ ಶಿವಾಜಿ ಮಹಾರಾಜರ ಗಾರ್ಡನ್ ಹತ್ತಿರ ,ಆರ್ಪಿಡಿ ಹಾಗೂ ಗೋಗಟೆ ಕಾಲೇಜ್ ಹತ್ತಿರ, ಹರಿ ಮಂದಿರದ ಹತ್ತಿರ ಟ್ಯಾಟೋ ಕೇಂದ್ರಗಳನ್ನು ಪ್ರಾರಂಭ ಮಾಡುತ್ತಿದ್ದೇವೆ.
ಈ ಅಭಿಯಾನದಲ್ಲಿ ಹೊರರಾಜ್ಯದ ಅನೇಕ ಯುವಕರು ಭಾಗಿಯಾಗುತ್ತಿದ್ದಾರೆ. ಅವರಿಗೂ ಸ್ವಾಗತವಿದೆ. ಹೆಣ್ಣು ಮಕ್ಕಳಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಯುವತಿಯರು ಟ್ಯಾಟೋ ಚಿತ್ರ ಬಿಡಿಸುತ್ತಾರೆ.
ಈಗಾಗಲೇ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 80 ಸಾವಿರ ಲಾಡು ತಯಾರಾಗುತ್ತಿದ್ದು, ಕ್ಷೇತ್ರದ 80 ಸಾವಿರ ಕುಟುಂಬಗಳಿಗೆ ಲಾಡು ತಲುಪಲಿದೆ. ಈ ಲಾಡುವನ್ನು ಹೊರ ರಾಜ್ಯವಾದ ರಾಜಸ್ಥಾನ ಕಾರ್ಮಿಕರಿಂದ ತಯಾರಿಸಲಾಗುತ್ತಿದೆ. ಅಯೋಧ್ಯೆಯ ಸಂಭ್ರಮ ಬೆಳಗಾವಿಯಲ್ಲಿ ಕಂಡು ಬರುತ್ತಿದೆ ಎಂದರು.