ಸೊರಬದಲ್ಲಿ ಶ್ರದ್ಧಾ-ಭಕ್ತಿಯಿಂದ ಈದ್‌ ಮಿಲಾದ್‌ ಹಬ್ಬ

| Published : Sep 06 2025, 01:00 AM IST

ಸಾರಾಂಶ

ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಮರು ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರಿಂದ ಆಚರಿಸಿದರು.

ಸೊರಬ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಮರು ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರಿಂದ ಆಚರಿಸಿದರು.

ಹೊಸಪೇಟೆ ಬಡಾವಣೆ, ರಾಜೀವ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಗಮನ ಸೆಳೆದರು. ಹಬ್ಬದ ಪ್ರಯುಕ್ತ ಮಸೀದಿ ಹಾಗೂ ಮದರಸಾವನ್ನು ವಿದ್ಯುದೀಪಗಳಿಂದ ಅಲಂಕರಿಸಲಾಗಿತ್ತು.

ಚಿಣ್ಣರಾದಿಯಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಬಂಧು-ಬಾಂಧವರು ಹಾಗೂ ಸ್ನೇಹಿತರೊಂದಿಗೆ ಮಸೀದಿ ಬಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹೊಸಪೇಟೆ ಬಡಾವಣೆಯ ಶಾಫಿ ಬದ್ರಿಯಾ ಸುನ್ನಿ ಜಾಮೀಯಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ಶ್ರೀ ಸ್ವಾಮಿ ವಿವೇಕಾನಂದ ವೃತ್ತ, ಸಿದ್ದಾಪುರ ರಸ್ತೆ, ಸಾಗರ ರಸ್ತೆ, ರಾಜೀವ ನಗರದ ಮದರಸಾವರೆಗೆ ತಲುಪಿ, ಪುನಃ ಮಸೀದಿಗೆ ಆಗಮಿಸಿತು.

ಶಾಫಿ ಬದ್ರಿಯಾ ಸುನ್ನಿ ಜಾಮೀಯಾ ಮಸೀದಿಯ ಧರ್ಮಗುರು ಮುಹಮ್ಮದ್ ರಫೀಕ್ ಮದನಿ ಧರ್ಮ ಸಂದೇಶ ನೀಡಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಮನುಕುಲಕ್ಕೆ ಸನ್ಮಾರ್ಗವನ್ನು ತೋರಿದ್ದಾರೆ. ಅವರು ತೋರಿದ ಹಾದಿಯಲ್ಲಿ ಸಾಗಬೇಕು. ಅವರ ಜನ್ಮದಿನವನ್ನು ಆಚರಿಸಲು ಒಂದು ಪವಿತ್ರ ದಿನವಾಗಿದ್ದು, ಪ್ರತಿಯೊಬ್ಬರು ಒಳಿತನ್ನೇ ಬಯಸಬೇಕು ಹಾಗೂ ಒಳಿತನ್ನೇ ಮಾಡಬೇಕು. ಪೈಗಂಬರರು ಜಗತ್ತಿಗೆ ಬೆಳಕನ್ನು ತೋರಿಸಿದ ಮಹಾನ್ ಪ್ರವಾದಿಯಾಗಿದ್ದಾರೆ ಎಂದರು.

ಮಸೀದಿಯ ಅಧ್ಯಕ್ಷ ಉಸ್ಮಾನ್ ಬ್ಯಾರಿ, ಕಾರ್ಯದರ್ಶಿ ಎ. ಅಬ್ದುಲ್ ರೆಹಮಾನ್, ಇಬ್ರಾಹಿಂ ಸಾಬ್, ಆಹ್ಮದ್ ಬಷೀರ್, ಇಸ್ಮಾಯಿಲ್ ಉಜರೆ, ಎ. ಅಬ್ಬುಸಾಬ್ ಜಾವೀದ್ ಜಬೀವುಲ್ಲಾ, ಅಬ್ದುಲ್ ಫಾರುಕ್, ಮುಹಮ್ಮದ್ ಅಲಿ, ಎಸ್.ಬಿ. ಹಸನ್, ರಫೀಕ್ ಮೇಸ್ತಿç, ಎಸ್‌ಎಸ್‌ಎಫ್ ಗೌರವಾಧ್ಯಕ್ಷ ನೂರುಲ್ಲಾ ಅಮೀನ್, ಅಧ್ಯಕ್ಷ ದಾವುದ್ ಶರೀಫ್, ಕಾರ್ಯದರ್ಶಿ ಎ. ಆಶೀಕ್, ನೌಶಾದ್, ಸಲೀಂ, ನಿಹಾಲ್, ಅಕ್ರಂ, ನೂರಾರು ಮುಸ್ಲಿಂ ಸಮಾಜದವರು ಇದ್ದರು.