ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಉನ್‌ನಬಿಯನ್ನು ನಗರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕು, ಹೋಬಳಿ, ಗ್ರಾಮೀಣ ಭಾಗದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ (ಸ) ಪೈಗಂಬರ್ ಅವರ ಜನ್ಮದಿನ ನಿಮಿತ್ತ ಮುಸ್ಲಿಂ ಬಾಂಧವರು ಆಚರಿಸುವ ಈದ್ ಮಿಲಾದ್ ಅತ್ಯಂತ ಸಂಭ್ರಮ, ಸಡಗರದಿಂದ ವಿಜೃಂಭಣೆಯಿಂದ ನಡೆಯಿತು. ಗಣೇಶೋತ್ಸವದ 9ನೇ ದಿನದ ವಿಸರ್ಜನ ಕಾರ್ಯ ಹಾಗೂ ಈದ್‌ಮಿಲಾದ್ ಎರಡೂ ಏಕಕಾಲಕ್ಕೆ ಬಂದ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್‌ಕಲ್ಪಿಸಲಾಗಿತ್ತು. ಎಲ್ಲಿಯೂ ಕೋಮುಸೌಹಾರ್ದತೆಗೆ ಧಕ್ಕೆಯಾಗದಂತೆ ಉಭಯ ಸಮುದಾಯಗಳು ತಮ್ಮ ಹಬ್ಬಗಳನ್ನು ಆಚರಿಸಿಕೊಂಡು ಮಾದರಿಯಾದರು.
ಈದ್ ನಿಮಿತ್ತ ಮುಸ್ಲಿಂ ಸಹೋದರರು ಹೊಸ ಬಟ್ಟೆ ಧರಿಸಿ, ಮಸೀದಿ, ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ, ಮುಹಮ್ಮದ್ (ಸ) ಅವರ ಜೀವನ-ಸಾಧನೆಗಳ ಪ್ರವಚನ, ಹದೀಸ್ ಪಠಣೆ, ಧರ್ಮ ಸಂದೇಶಗಳನ್ನು ಹಾಲಿಸಿದರು. ತಮ್ಮ ತಮ್ಮ ಮನೆಗಳಲ್ಲಿ ಹೋಳಿಗೆ, ಕಡುಬು ಸೇರಿದಂತೆ ಹಲವಾರು ರೀತಿಯ ಸಿಹಿ ಖಾದ್ಯಗಳನ್ನು ತಯಾರಿಸಿ ನೆರೆಹೊರೆಯವರಿಗೆ ಪರಸ್ಪರ ಹಂಚಿದರು.ಹಬ್ಬದ ಮುನ್ನ ದಿನ ರವಿವಾರ ರಾತ್ರಿ ಬಾಂಧವರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಸಾಧನೆ ಕುರಿತು ತಿಳಿಸಲಾಯಿತು. ಆನಂತರ ತಮ್ಮ ಮನೆ, ಬಡಾವಣೆಯ ರಸ್ತೆಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿ ಹಬ್ಬಕ್ಕೆ ಮೆರಗು ನೀಡಿದರು.
ರವಿವಾರ ರಾತ್ರಿಯಿಂದ ಆರಂಭಗೊಂಡ 9 ನೇ ದಿನದ ಗಣೇಶ ವಿಸರ್ಜನೆ ಕಾರ್ಯವು ಸೋಮವಾರ ಮಧ್ಯಾಹ್ನದ ವರೆಗೂ ನಡೆಯಿತು. ನಂತರ ಮುಸ್ಲಿಂ ಬಾಂಧವರು ಮೆಕ್ಕಾ ಮಸೀದಿ ಸೇರಿ ಧಾರ್ಮಿಕ ಸ್ತಬ್ಧ ಚಿತ್ರಗಳ ಅದ್ಧೂರಿ ಮೆರವಣಿಗೆ ನಡೆಸಿದರು. ಹೀಗೆ ಉಭಯ ಧರ್ಮದವರು ತಮ್ಮ ತಮ್ಮ ಹಬ್ಬಗಳನ್ನು ಸೌಹಾರ್ದತೆ ಧಕ್ಕೆಯಾಗದಂತೆ ಅತ್ಯಂತ ಶಾಂತಿಯುತವಾಗಿ ಆಚರಿಸಿದರು.ಮೆರವಣಿಗೆ:ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ಪ್ರಮುಖ ಮಸೀದಿ ಹಾಗೂ ಬಡಾವಣೆಗಳಲ್ಲಿ ಅನ್ನಸಂತರ್ಪಣೆ ಮಾಡಿದ್ದರು. ವಿವಿಧ ಬಡಾವಣೆ, ವೃತ್ತಗಳಲ್ಲಿರುವ ಮುಖ್ಯವಾದ ಮಸೀದಿಗಳಿಂದ ಮುಹಮ್ಮದ್ ಪೈಗಂಬರ್ ಅವರ ಜನ್ಮಸ್ಥಳ ಮೆಕ್ಕಾ ಹಾಗೂ ಇಸ್ಲಾಂ ಪ್ರಚಾರ ಅರಂಭಿಸಿದ ಮದೀನಾ ನಗರಗಳ ಸ್ತಬ್ಧ ಚಿತ್ರದ ಮೆರವಣಿಗೆ ನಡೆಸಿದರು.
ಆಯಾ ಬಡಾವಣೆಗಳಿಂದ ತೀನ್ ಖಂದಿಲ್ ಮೂಲಕ ಜಾಕೀರ್‌ಹುಸೇನ್‌ವೃತ್ತ, ನಗರಸಭೆ ಮಾರ್ಗವಾಗಿ ಅರಬ್ ಮೊಹಲ್ಲಾ ವರೆಗೆ ಅದ್ದೂರಿ ಮೆರವಣಿಗೆಯನ್ನು ಮಾಡಿ, ಮಹಮ್ಮದ ಪೈಗಂಬರ್ ಅವರ ಕುರಿತ ನಾತ್ಗಳು ಹಾಡಲಾಯಿತು. ಮೆರವಣಿಗೆಯುದ್ದಕ್ಕು ತಂಪುಪಾನೀಯಗಳ ವಿತರಣೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಇಸ್ಲಾಂ ಧರ್ಮದ ಗುರುಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು,ಸಂಘ-ಸಂಸ್ಥೆಗಳ ಪದಾಧಿಕಾರಿಗಳು,ಸದಸ್ಯರು ಮುಸ್ಲಿಂ ಸಹೋದರರಿಗೆ ಹಬ್ಬದ ಶುಭಾಶಯಗಳನ್ನು ಕೋರಿದರು. ರಸ್ತೆ ಎರಡೂ ಬದಿಯಲ್ಲಿ ಮಹಿಳೆಯರು,ಮಕ್ಕಳು, ಸಾರ್ವಜನಿಕರು ಈದ್‌ನ ಸಂಭ್ರಮವನ್ನು ವೀಕ್ಷಿಸಿ ಖುಷಿಪಟ್ಟರು.