ಸಾರಾಂಶ
ಬೆಳಗಾವಿ ನಗರದಲ್ಲಿ ಭಾನುವಾರ ಮುಸ್ಲಿಂ ಧರ್ಮಿಯರು ಈದ್ ಮಿಲಾದ್ ಮೆರವಣಿಗೆ ಅದ್ಧೂರಿಯಾಗಿ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಭಾನುವಾರ ಮುಸ್ಲಿಂ ಧರ್ಮಿಯರು ಈದ್ ಮಿಲಾದ್ ಮೆರವಣಿಗೆ ಅದ್ಧೂರಿಯಾಗಿ ನಡೆಸಿದರು.ಸೆ.16ರಂದು ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಗಣೇಶೋತ್ಸವದ ಹಿನ್ನೆಲೆ ಮುಸ್ಲಿಂ ಸಮಾಜದ ಮುಖಂಡರು ಸೆ.22ಕ್ಕೆ ಮುಂದೂಡಿದ್ದರು. ಹಾಗಾಗಿ, ಭಾನುವಾರ ಈದ್ ಮಿಲಾದ್ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಯುವಕರು,ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಹಳೆ ಪಿಬಿ ರಸ್ತೆಯಲ್ಲಿ ಉತ್ತರ ಶಾಸಕ ಆಸೀಫ್ ಸೇಠ್ ಮೆರವಣಿಗೆ ಚಾಲನೆ ನೀಡಿದರು. ಕೇಂದ್ರ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತದ ಮೂಲಕ ಸಾಗಿ ಕ್ಯಾಂಪ್ ಪ್ರದೇಶದ ಅಸದ್ ಖಾನ್ ದರ್ಗಾ ಬಳಿ ವಿಸರ್ಜನೆಗೊಂಡಿತು. ಮೆರವಣಿಗೆಯಲ್ಲಿ ಯುವಕರು ಉತ್ಸಾಹದಿಂದ ಹೆಜ್ಜೆಹಾಕಿದರು. ಮೆರವಣಿಗೆಯುದ್ದಕ್ಕೂ ಇಸ್ಲಾಂ ಧರ್ಮದ ಧ್ವಜಗಳು ರಾರಾಜಿಸಿದವು. ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ಹಸಿರು ಬಣ್ಣ ಎರಚಿ ಸಂಭ್ರಮಿಸಿದರು. ಡಿಜೆ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು.ಇಸ್ಲಾಮ್ ಧರ್ಮಗುರು ಮುಫ್ತಿಮಂಜೂರ ಆಲಂ, ಪೀರಸಾಬ್ ಸಯ್ಯದ್ ಕಾಶೀಮ್ ಅಶ್ರಪ್, ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ವಿಕಾಸ ಕಲಘಟಗಿ, ಬಾಬುಲಾಲ ರಾಜಪುರೋಹಿತ ಮತ್ತಿತರರು ಪಾಲ್ಗೊಂಡಿದ್ದರು.