ಸಾರಾಂಶ
ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನದ ನಿಮಿತ್ತ ಆಚರಿಸಲ್ಪಡುವ ಈದ್ ಮಿಲಾದನ್ನು ಸಂಭ್ರಮ, ಸಡಗರದಿಂದ ಕೊಪ್ಪಳ ನಗರದಲ್ಲಿ ಆಚರಿಸಲಾಯಿತು.
ಡಿಜೆ ಸದ್ದು ಇಲ್ಲದೆ ಶಾಂತಿಯುತವಾಗಿ ಮೆರವಣಿಗೆ । ಟ್ರ್ಯಾಕ್ಟರಿ ಚಲಾಯಿಸಿದ ಶಾಸಕ ರಾಘವೇಂದ್ರ ಹಿಟ್ನಾಳ
ಕನ್ನಡಪ್ರಭ ವಾರ್ತೆ ಕೊಪ್ಪಳಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನದ ನಿಮಿತ್ತ ಆಚರಿಸಲ್ಪಡುವ ಈದ್ ಮಿಲಾದನ್ನು ಸಂಭ್ರಮ, ಸಡಗರದಿಂದ ಕೊಪ್ಪಳ ನಗರದಲ್ಲಿ ಆಚರಿಸಲಾಯಿತು.
ಯಾವುದೇ ಡಿಜೆ ಸದ್ದು ಇಲ್ಲದೆ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಸಮಾಜದ ಹಿರಿಯರು ಸೇರಿ ತೆಗೆದಕೊಂಡ ನಿರ್ಣಯದಂತೆ ಡಿಜೆ ಅಬ್ಬರಕ್ಕೆ ಬ್ರೇಕ್ ಹಾಕಿ, ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.ನಗರದ ಜಾಮೀಯಾ ಮಸೀದಿಯಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್, ಅಮರೇಶ ಕರಡಿ, ಪೀರಾ ಹುಸೇನ್ ಹೊಸಹಳ್ಳಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ನಂತರ ನಗರದ ಜವಾಹರ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ಸಕರ್ಲ್‌ನಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಪುಟಾಣಿ ಮಕ್ಕಳು, ಯುವಕರು, ಹಿರಿಯರು ಶ್ರದ್ಧಾಭಕ್ತಿಯಿಂದಲೇ ಪಾಲ್ಗೊಂಡು ಪ್ರವಾದಿಗಳ ಚಿಂತನೆಗಳ ಸಂದೇಶ ಸಾರಿದರು. ಮೆರವಣಿಗೆಯಲ್ಲಿ ಹಲವು ನಾಯಕರು ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.ಟ್ರ್ಯಾಕ್ಟರಿ ಚಲಾಯಿಸಿದ ಶಾಸಕ:
ಮೆರವಣಿಗೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಟ್ರ್ಯಾಕ್ಟರಿ ಚಲಾಯಿಸಿದರು. ಈದ್ ಮಿಲಾದ್ ಮೆರವಣಿಗೆಯಲ್ಲಿ ಕೆಲಹೊತ್ತು ಟ್ರ್ಯಾಕ್ಟರಿಯನ್ನು ಚಲಾಯಿಸುವ ಮೂಲಕ ಶಾಸಕರು ಗಮನ ಸೆಳೆದರು. ಇದಕ್ಕೆ ಕಾಂಗ್ರೆಸ್ ಮುಖಂಡ ಅಮರೇಶ ಕರಡಿ ಸಹ ಸಾಥ್ ನೀಡಿದರು.ಪಾನೀಯ ವಿತರಣೆ:
ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಅಪ್ಪು ಸರ್ಕಲ್ ಬಳಿ ಗಜಾನನ ಮಿತ್ರ ಮಂಡಳಿಯವರು ತಂಪುಪಾನೀಯ ವಿತರಣೆ ಮಾಡುವ ಮೂಲಕ ಭಾವೈಕ್ಯತೆಯ ಸಂದೇಶ ರವಾನೆ ಮಾಡಿದರು.