ತ್ಯಾಗ, ಬಲಿದಾನದ ಮಹತ್ವ ಸಾರುವ ಈದುಲ್ ಅಝಾ ಹಬ್ಬ: ಕೋಟೆ ಜಾಮಿಯ ಮಸೀದಿಯ ಗುರು

| Published : Jun 18 2024, 12:49 AM IST

ತ್ಯಾಗ, ಬಲಿದಾನದ ಮಹತ್ವ ಸಾರುವ ಈದುಲ್ ಅಝಾ ಹಬ್ಬ: ಕೋಟೆ ಜಾಮಿಯ ಮಸೀದಿಯ ಗುರು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವರಿಗೂ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬ ಜಾತಿ, ಧರ್ಮ, ಭೇದ ಭಾವವೆನ್ನದೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವ ಸಂದೇಶವಾಗಿದೆ ಎಂದು ಕೋಟೆ ಜಾಮಿಯ ಮಸೀದಿಯ ಗುರು ಇರ್ಫಾನ್ ರಜಾ ಹೇಳಿದರು. ಬೇಲೂರಿನಲ್ಲಿ ಬಕ್ರೀದ್‌ ಹಬ್ಬದ ಆಚರಣೆ ವೇಳೆ ಮಾತನಾಡಿದರು.

ಬಕ್ರೀದ್‌ ಆಚರಣೆ । ಸಾಮೂಹಿಕ ಪ್ರಾರ್ಥನೆ । ಪೊಲೀಸ್‌ ಇಲಾಖೆಯಿಂದ ಬಿಗಿ ಬಂದೋಬಸ್ತ್‌

ಕನ್ನಡಪ್ರಭ ವಾರ್ತೆ ಬೇಲೂರು

ಸರ್ವರಿಗೂ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬ ಜಾತಿ, ಧರ್ಮ, ಭೇದ ಭಾವವೆನ್ನದೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವ ಸಂದೇಶವಾಗಿದೆ. ಎಲ್ಲರೂ ಜಾತಿ, ಧರ್ಮಗಳ ಹೊರತಾಗಿ ಪ್ರೀತಿ, ಮಮತೆ, ಶಾಂತಿ ಸಹೋದರತೆಯನ್ನು ನಾಡಿನಲ್ಲಿ ಉಳಿಸಿ, ಬೆಳೆಸೋಣ. ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಸಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬವಾಗಿದೆ ಎಂದು ಕೋಟೆ ಜಾಮಿಯ ಮಸೀದಿಯ ಗುರು ಇರ್ಫಾನ್ ರಜಾ ಹೇಳಿದರು.

ಪಟ್ಟಣದ ಗೆಂಡೆಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಇರ್ಫಾನ್ ರಾಜಾ ರವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಇರ್ಫಾನ್‌ ರಜಾ, ‘ಮಾನವೀಯ ಮೌಲ್ಯಗಳು ನಶಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಿ, ಬಡವ, ಶ್ರೀಮಂತರ ನಡುವಿನ ಅಂತರವನ್ನು ಕಡಿಮೆಗೊಳಿಸಲು ಇಂದಿನ ದಿನವು ನಮಗೆ ಪ್ರೇರಣೆಯಾಗಲಿ. ಈ ಶುಭ ದಿನದಂದು ಜಗತ್ತಿನಾದ್ಯಂತ ದೌರ್ಜನ್ಯ, ದಬ್ಬಾಳಿಕೆ, ಅವಮಾನಕ್ಕೆ ಒಳಗಾಗಿ ನ್ಯಾಯ ನಿರಾಕರಿಸಲ್ಪಟ್ಟ ಜನಸಮುದಾಯದ ಪರವಾಗಿ ಪ್ರಾರ್ಥಿಸೋಣ. ಇಸ್ಲಾಂ ಧರ್ಮದಲ್ಲಿ ಸ್ವಚ್ಛತೆಯ ಬಗ್ಗೆ ಪ್ರಮುಖ್ಯತೆ ನೀಡಿದ್ದಾರೆ. ಅದರಂತೆ ನೀವು ಸಹ ವಾಸಿಸುವ ಸ್ಥಳದಲ್ಲಿ ಸುತ್ತಮುತ್ತ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ಸುಂದರ ಪರಿಸರ ಬಗ್ಗೆ ಕಾಳಜಿ ವಹಿಸಬೇಕು. ವಿಶೇಷವಾಗಿ ದೌರ್ಜನ್ಯಕ್ಕೆ ಒಳಗಾಗುವ ಬಡವರ ಬಗ್ಗೆ ಅಪಾರ ಕಾಳಜಿ ವಹಿಸಿ ಮುಖ್ಯ ವಾಹಿನಿಗೆ ತರುವಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಕೇವಲ ಪ್ರಾಣಿ ಬಲಿ ನೀಡುವುದರಿಂದ ತ್ಯಾಗ ಬಲಿದಾನಕ್ಕೆ ಅರ್ಥವಿಲ್ಲ. ನಮ್ಮಲ್ಲಿರುವ ಅಸೂಯೆ, ಕೋಪ, ದುಷ್ಟ ನಿರ್ಧಾರಗಳನ್ನು ಮೊದಲು ತ್ಯಜಿಸಿದರೆ ನಿಜವಾದ ಬಕ್ರೀದ್ ಹಬ್ಬ ಎನಿಸುತ್ತದೆ ಎಂದು ತಿಳಿಸಿದರು.

ಪೇಟೆ ಜಾಮಿಯ ಮಸೀದಿಯ ಗುರು, ಬೇಲೂರು ಪಟ್ಟಣದ ಭಕ್ತಾದಿಗಳ ಸಮೂಹ ಹಾಜರಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವತಿಯಿಂದ ಸರ್ಕಲ್ ಇನ್‌ಸ್ಪೆಕ್ಟರ್ ಜಯರಾಮ್. ಸಬ್ ಇನ್‌ಸ್ಪೆಕ್ಟರ್ ಪ್ರವೀಣ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.