ಭಟ್ಕಳದಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್

| Published : Apr 01 2025, 12:45 AM IST

ಭಟ್ಕಳದಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್
Share this Article
  • FB
  • TW
  • Linkdin
  • Email

ಸಾರಾಂಶ

ಭಟ್ಕಳದ ಮುಸ್ಲಿಮರು ಸೋಮವಾರ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸೋಮವಾರ ಬೆಳಗ್ಗೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸನಿಹದ ಈದ್ಗಾ ಮೈದಾನದಲ್ಲಿ ನೆರವೇರಿಸಿದರು.

ಭಟ್ಕಳ: ಇಲ್ಲಿಯ ಮುಸ್ಲಿಮರು ಸೋಮವಾರ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ರಂಜಾನ್‌ ಉಪವಾಸದ 29ನೇ ದಿನವಾದ ಭಾನುವಾರ ರಾತ್ರಿ ಆಗಸದಲ್ಲಿ ಚಂದ್ರ ಗೋಚರವಾದ ಹಿನ್ನೆಲೆಯಲ್ಲಿ ಮುಸ್ಲಿಮರು ಉಪವಾಸ ಅಂತ್ಯಗೊಳಿಸಿ ಸೋಮವಾರ ಈದ್ ಹಬ್ಬದ ಆಚರಣೆಗೆ ಸಿದ್ಧರಾಗಿದ್ದರು. ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸೋಮವಾರ ಬೆಳಗ್ಗೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸನಿಹದ ಈದ್ಗಾ ಮೈದಾನದಲ್ಲಿ ನೆರವೇರಿಸಿದರು. ಜಾಮೀಯಾ ಮಸೀದಿಯಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಸಾವಿರಾರು ಮುಸ್ಲಿಮರು ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಈದ್ಗಾ ಮೈದಾನದಲ್ಲಿ ಜಾಮೀಯಾ ಮಸ್ಜೀದ್‌ನ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ ಅವರು ಪ್ರಾರ್ಥನೆ ನಿರ್ವಹಿಸಿ, ರಂಜಾನ್‌ ಮಾಸದ ಉಪವಾಸ ಮತ್ತು ಈದ್ ಉಲ್ ಪಿತ್ರ್ ಹಬ್ಬದ ಮಹತ್ವದ ಕುರಿತು ಪ್ರವಚನ ನೀಡಿದರು. ವಿವಿಧ ಮಸೀದಿಯ ಮೌಲಾನಾಗಳು, ಪ್ರಮುಖರು ಪಾಲ್ಗೊಂಡಿದ್ದರು.

ಈದ್ ಹಬ್ಬದ ಪ್ರಯುಕ್ತ ಬಿಳಿಯ ಬಟ್ಟೆ, ಟೋಪಿ ಧರಿಸಿದ್ದ ಮುಸ್ಲಿಮರು ಪರಸ್ಪರ ಅಪ್ಪುಗೆಯ ಮೂಲಕ ಈದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮುಂಜಾಗ್ರತಾ ಕ್ರಮವಾಗಿ ಈದ್ಗಾ ಮೈದಾನ ಸುತ್ತಮುತ್ತ ಸೇರಿದಂತೆ ಎಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಶಿರಾಲಿ, ಮುರ್ಡೇಶ್ವರದಲ್ಲೂ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆ: ಒಂದು ತಿಂಗಳ ಕಾಲ ಉಪವಾಸ ವ್ರತ ಆಚರಿಸಿದ ಮುಸ್ಲಿಮ್ ಸಮಾಜದವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ) ಹಬ್ಬವನ್ನು ಪಟ್ಟಣದ ಈದ್ಗಾ ಮೈದಾನದಲ್ಲಿ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಆಚರಿಸಿದರು. ಈ ಸಂದರ್ಭದಲ್ಲಿ ಪ್ರವಚನ ನೀಡಿದ ಧರ್ಮಗುರು ಮಹಮೂದ್ ರಜಾ, ಬಹಿರಂಗ ಶುದ್ಧಿ ಜತೆಗೆ ಅಂತರಂಗ ಶುದ್ಧಿ ಮಹತ್ವದ್ದಾಗಿದೆ. ರಂಜಾನ್ ಪವಿತ್ರ ಮಾಸದಲ್ಲಿ ಈ ಎರಡು ಕ್ರಿಯೆಗಳ ಪಾಲನೆ ಆಗಿದೆ. ಇದೇ ಶುದ್ಧಿಯನ್ನು ವರ್ಷಪೂರ್ತಿ ಆಚರಣೆಗೆ ತರುವಂತಾಗಬೇಕು ಎಂದರು.ಮಸೀದಿ ಕಮಿಟಿ ಅಧ್ಯಕ್ಷ ಖಾದರ್ ಬಾಷಾ ಹೊಸೂರ್ ಶುಭಾಶಯ ಕೋರಿದರು. ಪಪಂ ಮಾಜಿ ಸದಸ್ಯ ಮುನವ್ವರ್ ಗುರ್ಕಾರ್ ಮಸೀದಿ ಮದ್ರಸಾ ಏಳ್ಗೆ ಕುರಿತು ಮಾತನಾಡಿದರು. ಇಸ್ತಿಖಾಫ್‌ನಲ್ಲಿ ಭಾಗವಹಿಸಿದವರನ್ನು, ಹಜ್ ಯಾತ್ರೆಗೆ ಹೋಗುವವರನ್ನು ಸನ್ಮಾನಿಸಲಾಯಿತು. ಆನಂತರ ದರ್ಗಾಕ್ಕೆ ತೆರಳಿ ವಿಶ್ವಶಾಂತಿಗಾಗಿ ಮುಸ್ಲಿಮ್ ಸಮಾಜದವರು ಪ್ರಾರ್ಥನೆ ಸಲ್ಲಿಸಿದರು. ಉಪಾಧ್ಯಕ್ಷ ರಿಯಾಜ್ ಹೊಸೂರು, ಸದಸ್ಯ ಇಲಿಯಾಸ್ ಇಬ್ರಾಹಿಂ ಸಾಬ್, ಸ್ಯೆಯದ್ ಮುಷೀರ್, ಫಯಾಜ್ ಅಹ್ಮದ್, ಇದ್ರೂಸ್ ಬಿ. ಎ. ಸಾಬ್ ಮತ್ತಿತರರು ಉಪಸ್ಥಿತರಿದ್ದರು.