ಇಲ್ಲಿನ ಮುಸ್ಲಿಮರು ಶುಕ್ರವಾರ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಧಾರ್ಮಿಕ ಮಾರ್ಗದಲ್ಲಿ ನಡೆಯುವುದೇ ಶ್ರೇಷ್ಠ ಜೀವನ: ಮೌಲಾನಾ ಕ್ವಾಜಾ ಅಕ್ರಮಿ ನದ್ವಿ
ಕನ್ನಡಪ್ರಭ ವಾರ್ತೆ ಭಟ್ಕಳಇಲ್ಲಿನ ಮುಸ್ಲಿಮರು ಶುಕ್ರವಾರ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.ಬೆಳಗ್ಗೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸನಿಹದ ಈದ್ಗಾ ಮೈದಾನದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಮುಸ್ಲಿಮರು ಸಲ್ಲಿಸಿದರು. ಜಾಮೀಯಾ ಮಸೀದಿಯಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಸಾವಿರಾರು ಮುಸ್ಲಿಮರು ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಈದ್ಗಾ ಮೈದಾನದಲ್ಲಿ ಮರ್ಕಝಿ ಖಲೀಫಾ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಯಿನುದ್ದೀನ್ ಅಕ್ರಮಿ ಮದನಿ ನದ್ವಿ ಪ್ರಾರ್ಥನೆ ನಿರ್ವಹಿಸಿ ರಮಝಾನ ಮಾಸದ ಉಪವಾಸ ಮತ್ತು ಈದ್ ಉಲ್ ಪಿತ್ರ್ ಹಬ್ಬದ ಮಹತ್ವದ ಕುರಿತು ಪ್ರವಚನ ನೀಡಿದರು. ಇಸ್ಲಾಂ ಧರ್ಮವು ಕೇವಲ ಆಚರಣೆಗಳಿಗೆ ಸೀಮಿತವಲ್ಲ. ಅದು ಮಾನವೀಯತೆ, ನೈತಿಕತೆ ಮತ್ತು ಶಾಂತಿಯ ಮಾರ್ಗವಾಗಿದ್ದು, ಪ್ರತಿಯೊಬ್ಬ ಮುಸ್ಲಿಂ ತನ್ನ ನಡತೆ ಮತ್ತು ಚಾರಿತ್ರ್ಯದ ಮೂಲಕ ಧರ್ಮದ ಸತ್ಯತೆಯನ್ನು ಸಮಾಜಕ್ಕೆ ತೋರಿಸಬೇಕು.
ಧಾರ್ಮಿಕ ಮಾರ್ಗದಲ್ಲಿ ನಡೆಯುವುದೇ ಶ್ರೇಷ್ಠ ಜೀವನವೆಂದು ತಿಳಿಸಿದ ಅವರು, ನಮಾಜ್, ರೋಜಾ, ಝಕಾತ್ ಮತ್ತು ಹಜ್ ಸೇರಿದಂತೆ ಧಾರ್ಮಿಕ ಕರ್ತವ್ಯಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.ಧಾರ್ಮಿಕ ವಿಚಾರಗಳಿಗೆ ಸಾಮಾಜಿಕ ಜಾಲತಾಣಗಳ ಬದಲು ಉಲೇಮಾಗಳನ್ನು ಸಂಪರ್ಕಿಸಿ ಸರಿಯಾದ ಮಾರ್ಗದರ್ಶನ ಪಡೆಯುವಂತೆ ಸಲಹೆ ನೀಡಿದರು.
ಕುಟುಂಬವೇ ಸಮಾಜದ ಅಡಿಪಾಯವಾಗಿದ್ದು. ದೇಶದಲ್ಲಿ ಸಹಬಾಳ್ವೆ ಮತ್ತು ಸೌಹಾರ್ದತೆ ಕಾಪಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು.ತಮ್ಮ ನಡವಳಿಕೆಯ ಮೂಲಕವೇ ಇಸ್ಲಾಂನ ಶಾಂತಿ ಸಂದೇಶವನ್ನು ಸಮಾಜಕ್ಕೆ ತಲುಪಿಸಬೇಕು ಎಂದು ಕರೆ ನೀಡಿದರು.ಈ ಸಂದರ್ಭ ವಿವಿಧ ಮಸೀದಿಯ ಮೌಲಾನಾಗಳು, ಪ್ರಮುಖರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು.ಈದ್ ಪ್ರಯುಕ್ತ ಬಿಳೆ ಬಟ್ಟೆ, ಟೋಪಿ ಧರಿಸಿದ್ದ ಮುಸ್ಲಿಮರು ಪರಸ್ಪರ ಅಪ್ಪುಗೆಯ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಮುಂಜಾಗ್ರತಾ ಕ್ರಮವಾಗಿ ಈದ್ಗಾ ಮೈದಾನ ಸುತ್ತಮುತ್ತ ಸೇರಿದಂತೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
--------20ಬಿಕೆಲ್1: ಭಟ್ಕಳದ ಬಂದರು ರಸ್ತೆಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.