ಬೀದರ್‌ನ ಎಲ್ಲೆಡೆ ಈದ್ ಉಲ್‌ ಫಿತರ್‌ ಆಚರಣೆ

| Published : Apr 12 2024, 01:05 AM IST

ಬೀದರ್‌ನ ಎಲ್ಲೆಡೆ ಈದ್ ಉಲ್‌ ಫಿತರ್‌ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಈದ್ಗಾದಲ್ಲಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶಾಂತಿ ಸೌಹಾರ್ದತೆಗಾಗಿ ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌ನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಡಗರ ಸಂಭ್ರಮದಿಂದ ಈದ್‌ ಉಲ್‌ ಫಿತರ್ (ರಂಜಾನ್‌) ಆಚರಣೆಯನ್ನು ಮಾಡಲಾಯಿತು.

ನಗರದ ಬಸ್‌ ನಿಲ್ದಾಣದ ಎದುರಿನ ಈದ್ಗಾದಲ್ಲಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶಾಂತಿ ಸೌಹಾರ್ದತೆಗಾಗಿ ಪ್ರಾರ್ಥಿಸಿದರು. ಪ್ರಾರ್ಥನೆ ನಂತರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‌ ಖಾನ್‌ ಸೇರಿದಂತೆ ಮತ್ತಿತರರು ಶುಭಾಶಯ ಕೋರಿದರು.

ಕಮಲನಗರದಲ್ಲಿ ರಂಜಾನ್‌ ಸಮಾನತೆ, ಸಹೋದರತ್ವದ ಪ್ರತೀಕಪವಿತ್ರ ರಂಜಾನ ಹಬ್ಬದ ಪ್ರಯುಕ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರೆಲ್ಲ ಸೇರಿ ಗುರುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೌಲಾನಾ ಮುಫ್ತಿ ಶಾರುಖ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

ರಂಜಾನ್‌ ತಿಂಗಳಲ್ಲಿ ನಿರಂತರ ಉಪವಾಸ ವ್ರತ ಕೈಗೊಳ್ಳುವ ಮೂಲಕ ಮುಸ್ಲಿಂ ಬಾಂಧವರು ಹಬ್ಬದ ಮುನ್ನಾ ದಿನ ರಾತ್ರಿ ಚಂದ್ರನ ದರ್ಶನ ಮಾಡಿ ಹಬ್ಬಕ್ಕೆ ಚಾಲನೆ ನೀಡಿದರು. ಬುಧವಾರ ರಾತ್ರಿ ಚಂದ್ರನ ದರ್ಶನ ಪಡೆದು ಮುಸ್ಲಿಂ ಬಾಂಧವರು ಚಾಂದ್‌ ಮುಬಾರಕ್‌ ಎಂದು ಪರಸ್ಪರ ಶುಭಾಶಯ ಕೋರಿ ಮರು ದಿನ ಗುರುವಾರ ಪವಿತ್ರ ರಂಜಾನ ಹಬ್ಬ ಸಡಗರ, ಸಂಭ್ರಮದಿಂದ ಆಚರಿಸಿದರು.

ಹಬ್ಬದ ದಿನ ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಬಡವರಿಗೆ, ದೀನ ದಲಿತರಿಗೆ, ರೋಗಿಗಳಿಗೆ ತಮ್ಮ ಶಕ್ತಿ ಅನುಸಾರವಾಗಿ ದಾನ ಮಾಡುವುದು ಇವರ ಸಂಪ್ರದಾಯ. ಈ ಹಬ್ಬ ಸಮಾನತೆ ಹಾಗೂ ಸಹೋದರತ್ವದ ಪ್ರತೀಕವಾಗಿ ಆಚರಿಸುತ್ತಾರೆ. ಮುಸ್ಲಿಂ ಸಮುದಾಯದ ಅತಿ ದೊಡ್ಡ ಹಬ್ಬವೆಂದು ಕರೆಯಲ್ಪಡುವ ರಂಜಾನ್‌ ಹಬ್ಬದಂದು ಮನೆಯಲ್ಲಿ ಶುರಕುಂಬಾ, ಬಗೆ ಬಗೆಯ ಸಿಹಿ ತಿಂಡಿ ತಿನಿಸು ತಯಾರಿಸಿ ಜಾತಿ, ಭೇದ ಎನ್ನದೆ ಎಲ್ಲ ಸಮುದಾಯದವರಿಗೂ ಭಾವೈಕ್ಯತೆಯ ದೃಷ್ಟಿಯಿಂದ ಔತಣಕ್ಕೆ ಆಹ್ವಾನಿಸುತ್ತಾರೆ.

ಗ್ರಾಪಂ ಸದಸ್ಯ ಸಲೀಂ ಶೇಖ, ಆಯೂಬ ಖುರೇಶಿ, ಅಜರ ಬಾಗವಾನ್‌, ಅಬೇದ ಶೇಖ, ಆಸೀಫ್‌ ಪಟೇಲ್‌, ನಾಜಿಮ್‌ ಬಾಗವಾನ್‌, ಇಸ್ಮಾಯಿಲ್‌ ಪಠಾಣ, ಶೇರು ಬಾಗವಾನ್‌, ಮುಕ್ತಾರ ಮನಿಯಾರ, ಶಬ್ಬಿರ ಖುರೇಶಿ , ಮೋಹಸೀನ ಬಾಗವಾನ್‌, ಆದಿಲ್‌ ಬಾಗವಾನ್‌, ಶೇಕ್‌ ಅಲಿ ಬಾಗವಾನ್‌, ಇಲಾಹಿ ಪಠಾಣ, ಎಂಡಿ ಜಾಫರ, ಆಸೀಫ ಮನಿಯಾರ, ಅರೀಫ ಪಟೇಲ್‌, ಯಾಸಿನ ಬಾಗವಾನ್‌, ಸಲ್ಮಾನ ಖುರೇಶ, ಜೈದ ತಂಬೋಲಿ, ಸಲಾವೋದ್ದೀನ್‌ ಬಾಗವಾನ್‌, ಆಸೀಫ ಪಠಾಣ, ಯೂಸೂಫ ಮನಿಯಾರ, ಅಕ್ರಮ ಬಾಗವಾನ್‌ ಹಾಗೂ ಅನೇಕ ಮುಸ್ಲಿಂ ಸಮುದಾಯದವರು ಪಾಲ್ಗೊಂಡಿದ್ದರು.

ತಾಲೂಕಿನ ಖತಗಾಂವ್‌, ಮುರ್ಕಿ, ರಂಡ್ಯಾಳ, ಡೋಣಗಾಂವ್‌, ಸೋನಾಳ, ಹೋಳಸಮುದ್ರ, ಠಾಣಾಕುಶನೂರ, ದಾಬಕಾ, ಬೇಳಕೋಣಿ(ಭೋ), ತೋರಣಾ, ಮುಧೋಳ ಹಾಗೂ ವಿವಿಧ ಗ್ರಾಮಗಳಲ್ಲಿ ಪವಿತ್ರ ರಂಜಾನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

ಹುಮನಾಬಾದ್‌ನಲ್ಲಿ ರಂಜಾನ್‌ ಆಚರಣೆ:

ಶಾಂತಿ ಸೌಹಾರ್ದತೆಯ ಪ್ರತೀಕವಾದ ಮುಸ್ಲಿಂ ಧರ್ಮಿಯರ ಈದ್‌ ಉಲ್‌ ಫಿತರ್‌ ರಂಜಾನ್ ಹಬ್ಬದ ಪ್ರಯುಕ್ತ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯರು ಸೇರಿ ಮುಸ್ಲಿಂ ಸಮುದಾಯದವರಿಗೆ ಶುಭಾಶಯ ಕೋರಿದರು.

ಮುಸ್ಲಿಂ ಧರ್ಮೀಯ ಮುಖಂಡರು ರಂಜಾನ್‌ ಅಂಗವಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪಟ್ಟಣದ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರ ಗೃಹ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಸ್ಪರ ರಂಜಾನ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.

ಮಾಜಿ ಸಚಿವ ರಾಜಶೇಖರ ಪಾಟೀಲ್‌ ಈ ಸಂಧರ್ಭದಲ್ಲಿ ಮಾತನಾಡಿ. ಪವಿತ್ರವಾದ ರಂಜಾನ್‌ ಹಬ್ಬ ಶಾಂತಿ ಸೌಹಾರ್ದತೆಯ ಸಂಕೇತ. ಹಿಂದೂ ಮುಸ್ಲಿಂಮರು ಅಣ್ಣ ತಮ್ಮಂದಿರಂತೆ ಬಾಳ್ವೆ ನಡೆಸಿಕೊಂಡು ಹೋಗುತ್ತಿದ್ದೇವೆ. ರಂಜಾನ್‌ ಸೇರಿದಂತೆ ಹಿಂದೂ, ಮುಸ್ಲಿಂಮರ ಎಲ್ಲ ಹಬ್ಬವನ್ನು ಜೊತೆಗೂಡಿಯೇ ಆಚರಿಸೋಣ ಎಂದರು. ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ಮಾತನಾಡಿ, ಇಸ್ಲಾಂ ಧರ್ಮದ ಸಿದ್ಧಾಂತಗಳಲ್ಲಿ ಪ್ರಮುಖವಾದ ಉಪವಾಸವನ್ನು ಒಂದು ತಿಂಗಳ ಕಾಲ ಶ್ರದ್ಧಾ ಭಕ್ತಿಯಿಂದ ಮಾಡುವ ಮೂಲಕ ನಾಡಿನಾದ್ಯಂತ ಶಾಂತಿ, ಸೌಹಾರ್ದತೆಯ ರಂಜಾನ್ ಹಬ್ಬವನ್ನು ಆಚರಿಸುತ್ತಿರುವ ಎಲ್ಲಾ ಮುಸ್ಲಿಂ ಭಾಂಧವರಿಗೆ ಇದೆ ಸಂಧರ್ಭದಲ್ಲಿ ಶುಭಾಶಯ ಕೋರಿದರು.

ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿ. ರಂಜಾನ್‌ ಹಬ್ಬ ಮುಸಲ್ಮಾನ ಸಮುದಾಯದವರ ಅತ್ಯಂತ ಪವಿತ್ರ ಹಬ್ಬ, ಈ ಹಬ್ಬ ಶಾಂತಿ, ಸಾಮರಸ್ಯದ ಸಂದೇಶಗಳನ್ನು ವಿಶ್ವದಲ್ಲಿ ಸಾರಿದೆ. ಈ ಹಬ್ಬದ ಸಂದೇಶವನ್ನು ನಾವೆಲ್ಲರೂ ಪಾಲಿಸುವುದು ಇಂದಿನ ಅಗತ್ಯವಾಗಿದೆ. ನಾವು ಎಲ್ಲರೂ ಸಹೋದರತೆ, ಶಾಂತಿಯೊಂದಿಗೆ ಸಹಬಾಳ್ವೆ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದರು.ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಉಪಾಧ್ಯಕ್ಷ ಅಭೀಷೇಕ ಪಾಟೀಲ್‌, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ವೀರಣ್ಣ ಪಾಟೀಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಫ್ಸರಮಿಯ್ಯಾ ಸೇರಿದಂತೆ ನೂರಾರು ಮುಸ್ಲಿಂ ಸಮುದಾಯದವರು ಇದ್ದರು.