ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಮತಕ್ಷೇತ್ರ ವ್ಯಾಪ್ತಿಯ ನಾರಾಯಣಪುರ ಜಲಾಶಯದ ಹತ್ತಿರ ಸಾರ್ವಜನಿಕ ಉದ್ಯಾನವನ ನಿರ್ಮಿಸುವ ಪ್ರಸ್ತಾವನೆಯನ್ನು ಪ್ರಸ್ತುತ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಪ್ರಶ್ನಿಸಿ ಸರ್ಕಾರದ ಉಪಮುಖ್ಯಮಂತ್ರಿಗಳಿಂದ ಉತ್ತರ ಪಡೆದರು.ಕೇಂದ್ರ ಸರಕಾರದ ಡ್ರಿಪ್ (ಡ್ಯಾಂ ರಿಹೆಬಿಲೇಷನ್ ಮತ್ತು ಇಂಪ್ಯೂರ್ವಮೆಂಟ್ ಪ್ರಾಜೆಕ್ಟ್) ಹಂತ-2ರ ಸಹಾಯಧನದಡಿಯಲ್ಲಿ ನಾರಾಯಣಪುರ ಅಣೆಕಟ್ಟೆಯ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಸುಮಾರು ₹85 ಕೋಟಿಯ ಪ್ರಾಜೆಕ್ಟ್ ಸ್ಕ್ರೀನಿಂಗ್ ಟೆಂಪಲೇಟ್ ಪ್ರಸ್ತಾವನೆಯನ್ನು ರಾಜ್ಯ ಯೋಜನಾ ನಿರ್ವಹಣಾ ಘಟಕ, ಕೇಂದ್ರ ಯೋಜನಾ ನಿರ್ವಹಣಾ ಘಟಕ, ಸೆಂಟ್ರಲ್ ಪ್ರಾಜೆಕ್ಟ್ ಮಾನಿಟರಿಂಗ್ ಯುನಿಟ್ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿ, ಕೆಲವು ಅವಲೋಕನಗಳೊಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತಾವನೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಘಟಕದ ವಿಸ್ತ್ರತ ಕಾರ್ಯಸಾಧ್ಯತೆಯ ಅಧ್ಯಯನವನ್ನು ಮಂಡ್ಯದ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ ನಿರ್ದೇಶಕರು ನಡೆಸಿದ್ದಾರೆ.ಜಲಾಶಯದ ತಡೆಗೋಡೆ ನಿರ್ಮಾಣದ ಮೇಲೆ ಸ್ವಿಲ್‌ವೇ ಡಿಸ್ಟಾರ್ಜ್‌ನ ಪ್ರವೇಶ ಕುರಿತು ಭೌತಿಕ ಮಾದರಿ ಅಧ್ಯಯನವನ್ನು ಪೂರ್ಣಗೊಳಿಸಲಾಗಿದೆ. ಇದರ ಪ್ರಸ್ತಾವನೆಯನ್ನು ಅಂದಾಜು ಮೊತ್ತದೊಂದಿಗೆ ಸಿದ್ಧಪಡಿಸಿ, ನಿಯಮಾನುಸಾರ ಕೇಂದ್ರ ಯೋಜನಾ ನಿರ್ವಹಣಾ ಘಟಕಕ್ಕೆ ಅನುಮೋದನೆ ಹಾಗೂ ಸೂಕ್ತ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಲಾಗುವುದು ಎಂದು ತಿಳಿಸಿದ್ದಾರೆ.
ನಾರಾಯಣಪುರ ಆಣೆಕಟ್ಟೆಯ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸುವ ವಿಸ್ತ್ರತ ಯೋಜನಾ ಹಾಗೂ ಕಾರ್ಯಸಾಧ್ಯತೆ ಅಧ್ಯಯನವನ್ನು ನಡೆಸಿ ವರದಿಯನ್ನು ತಯಾರಿಸಲು ಸಮಾಲೋಚಕರನ್ನು ನೇಮಿಸಲಾಗಿದೆ ಎಂಬುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.ಕಾಮಗಾರಿಗಳು ಪ್ರಗತಿಯಲ್ಲಿರುವಾಗ ಹಸನಾಪುರ ಕಾಡಾ ಕಛೇರಿ ಸ್ಥಳಾಂತರಿಸುತ್ತಿರುವುದನ್ನು ತಡೆಹಿಡಿಯಬೇಕು ಎಂದು ನೂತನ ಶಾಸಕರು ಒತ್ತಾಯಿಸಿದಾಗ, ಹಸನಾಪುರ ಕಾಡಾ ವಿಭಾಗ ಕಚೇರಿಯನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರ ಆದೇಶದ ಮೇರೆಗೆ ಬಾಗಲಕೋಟೆ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆದೇಶ ಬದಲಾಯಿಸಿ ಕಾಡಾ ವಿಭಾಗ ಕಚೇರಿಯನ್ನು ಅಧಿಕಾರಿ ಹಾಗೂ ಸಿಬ್ಬಂದಿ ಸಮೇತ ವಿಜಯಪುರ ಜಿಲ್ಲೆಯ ಹೊರ್ತಿ ಗ್ರಾಮಕ್ಕೆ 2023 ನವೆಂಬರ್ 20 ರಂದು ಸ್ಥಳಾಂತರಿಸಲಾಗಿದೆ. ಈ ಪ್ರಕ್ರಿಯೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಡಿಸಿಎಂ ತಿಳಿಸಿದ್ದಾರೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.