ಸಾರಾಂಶ
ಮಾಂಸಕ್ಕಾಗಿ ವಿಷಪೂರಿತ ಕಾಳುಗಳನ್ನಿಟ್ಟು ಎಂಟು ನವಿಲು ಮಾರಣ ಹೋಮ ಮಾಡಿದ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ಘಟನೆಗೆ ಸಂಬಂಧ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಝಳಕಿ ಗ್ರಾಮದ ಮಂಜುನಾಥ್ ಬೇಷ್ಣು ಪವಾರ್‌ನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಾಂಸಕ್ಕಾಗಿ ವಿಷಪೂರಿತ ಕಾಳುಗಳನ್ನಿಟ್ಟು ಎಂಟು ನವಿಲು ಮಾರಣ ಹೋಮ ಮಾಡಿದ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ಘಟನೆಗೆ ಸಂಬಂಧ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಝಳಕಿ ಗ್ರಾಮದ ಮಂಜುನಾಥ್ ಬೇಷ್ಣು ಪವಾರ್‌ನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.ಚಿಕ್ಕೋಡಿ ತಾಲೂಕಿನ ಮಾಂಜರಿಯಲ್ಲಿನ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು, ಮಾಂಸಕ್ಕಾಗಿ ಮೆಕ್ಕೆಜೋಳದ ಕಾಳಿನಲ್ಲಿ ( ಗೋಂಜಾಳ) ವಿಷ ಬೆರಸಿ ನವಿಲುಗಳು ಓಡಾಡುವ ಸ್ಥಳದಲ್ಲಿ ಇಟ್ಟಿದ್ದಾರೆ. ಈ ಕಾಳು ತಿಂದ ಮೂರು ಹೆಣ್ಣು, ಐದು ಗಂಡು ಸೇರಿ ಒಟ್ಟು ಎಂಟು ನವಿಲುಗಳು ಮೃತಪಟ್ಟಿವೆ. ಈ ವಿಷಯ ತಿಳಿದ ಸ್ಥಳೀಯರು ಬೇಟೆಗಾರರ ಹಿಡಿಯಲು ಮುಂದಾಗಿದ್ದಾರೆ. ಆದರೆ, ಅವರು ನದಿಯಲ್ಲಿ ಈಜಿ ಬಳಿಕ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ರಾಯಬಾಗ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಸುನಿತಾ ನಿಂಬರಗಿ, ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗೌರಾಣಿ ಸೇರಿ ಇನ್ನೀತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
ಒಬ್ಬನನ್ನು ಈಗಾಗಲೇ ಬಂಧಿಸಿದೆ. ಪರಾರಿಯಾದ ಇಬ್ಬರ ಪತ್ತೆಗೆ ಸಿಸಿಎಫ್ ಮಂಜುನಾಥ ಚವ್ಹಾಣ ಹಾಗೂ ಡಿಸಿಎಫ್ ಶಿವಾನಂದ ನಾಯಕವಾಡಿ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿದೆ. ಮೃತ ನವಿಲುಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅವುಗಳ ಹೊಟ್ಟೆಯಲ್ಲಿ ಗೋವಿನ ಜೋಳದ ಕಾಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆ ಮೂಲಕ ಈ ಕಾಳು ವಿಷಪೂರಿತವಾಗಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖೆಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಾಗಿದ್ದು, ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.-ಸುನಿತಾ ನಿಂಬರಗಿ,
ಎಸಿಎಫ್