ಸಾರಾಂಶ
ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮಾಹಿತಿ । ವಿಶ್ವವಿದ್ಯಾಲಯದ 34ನೇ ವಾರ್ಷಿಕ ಘಟಿಕೋತ್ಸವ । 146 ಸ್ವರ್ಣ ಪದಕ ಪ್ರದಾನ
ಕನ್ನಡಪ್ರಭ ವಾರ್ತೆ ಶಿವಮೊಗ್ಗಕುವೆಂಪು ವಿಶ್ವ ವಿದ್ಯಾಲಯದ 34ನೇ ವಾರ್ಷಿಕ ಘಟಿಕೋತ್ಸವ ಜ.22 ರಂದು ಬೆಳಗ್ಗೆ 10.30ಕ್ಕೆ ಶಂಕರಘಟ್ಟ ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಬಸವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ತಿಳಿಸಿದರು.
ನಗರದಲ್ಲಿ ಸೋಮವಾರ ಮಾಧ್ಯನಗೋಷ್ಠಿಯಲ್ಲಿ ಮಾತನಾಡಿ. ಘಟಿಕೋತ್ಸವಕ್ಕೆ ರಾಜ್ಯಪಾಲ, ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೊಟ್ ಚಾಲನೆ ನೀಡಲಿದ್ದಾರೆ. ಸಚಿವ ಹಾಗೂ ವಿವಿಯ ಸಹ ಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿದ್ದು, ಮುಖ್ಯ ಅತಿಥಿಯಾಗಿ ಹೈದರಾಬಾದ್ ವಿವಿ ನಿವೃತ್ತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಘಟಿಕೋತ್ಸ ಭಾಷಣ ಮಾಡಲಿದ್ದಾರೆ ಎಂದರು.ಘಟಿಕೋತ್ಸವದಲ್ಲಿ 6872 ಪುರುಷರು ಹಾಗೂ 12013 ಮಹಿಳೆಯರು ಸೇರಿ ಒಟ್ಟು 18885 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಘಟಿಕೋತ್ಸವದಲ್ಲಿ 146 ಸ್ವರ್ಣ ಪದಕಗಳಿದ್ದು, ಇವುಗಳಲ್ಲಿ 13 ಪುರುಷರು ಹಾಗೂ 71 ಮಹಿಳೆಯರು ಸೇರಿ ಒಟ್ಟು 84 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಪಿಹೆಚ್‌ಡಿ ಪದವಿಯನ್ನು 115 ಪುರುಷರು ಹಾಗೂ 89 ಮಹಿಳೆಯರು ಸೇರಿ 204 ವಿದ್ಯಾರ್ಥಿಗಳು ಪಡೆಯಲಿದ್ದಾರೆ. 17 ನಗದು ಬಹುಮಾನಗಳಿದ್ದು, ಇವುಗಳಲ್ಲಿ 1 ಪುರುಷ ಹಾಗೂ 13 ಮಹಿಳೆಯರು ಸೇರಿ 14 ಜನ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್ ಮಾತನಾಡಿ, ಕಲಾ ನಿಕಾಯದಲ್ಲಿ 39 ಪುರುಷರು, 25 ಮಹಿಳೆಯರು ಸೇರಿ ಒಟ್ಟು 64 ವಿದ್ಯಾರ್ಥಿಗಳು , ವಾಣಿಜ್ಯ ವಿಭಾಗದಲ್ಲಿ 10 ಪುರುಷರು, 8 ಮಹಿಳೆಯರು ಸೇರಿ 18 ವಿದ್ಯಾರ್ಥಿಗಳು, ಶಿಕ್ಞಣ ನಿಕಾಯದಲ್ಲಿ 14 ಪುರುಷರು, 4 ಮಹಿಳೆಯರು ಸೇರಿ ಒಟ್ಟು 18 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ನಿಕಾಯದಲ್ಲಿ 52 ಪುರುಷರು, 52 ಮಹಿಳೆಯರು ಸೇರಿ ಒಟ್ಟು 104 ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪಿಎಚ್ ಡಿ ಪಡೆಯಲು ಅರ್ಹರಾಗಿದ್ದಾರೆಂದು ತಿಳಿಸಿದರು.ಪತ್ರಿಕೋದ್ಯಮ ವಿಭಾಗದ ಎಂ.ಆರ್. ಸತ್ಯಪ್ರಕಾಶ್ ಇದ್ದರು.
ಕಾಗೋಡು ತಿಮ್ಮಪ್ಪ ಸೇರಿ ಮೂವರಿಗೆ ಗೌರವ ಡಾಕ್ಟರೇಟ್:ಹಿರಿಯ ಮುತ್ಸದ್ದಿ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಮೂವರು ಸಾಧಕರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ತಿಳಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮುಂಬೈನ ವಿಜ್ಞಾನಿ ಸಿ.ಎಸ್. ಉನ್ನಿಕೃಷ್ಣನ್ ಮತ್ತು ಭದ್ರಾವತಿಯ ಯೋಗ ಗುರು ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿದ್ದು, ಅವರಿಗೆ ರಾಜ್ಯಪಾಲ ಥಾವರ್‌ಚೆಂದ್ ಗೆಹ್ಲೊಟ್ ಅವರು ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಿದ್ದಾರೆ ಎಂದರು.ಹೊರಗುತ್ತಿಗೆ ನೇಮಕ: ವರದಿ ಆಧರಿಸಿ ಕ್ರಮ
ಕುವೆಂಪು ವಿವಿಯಲ್ಲಿ ನೂರಕ್ಕೂ ಹೆಚ್ಚು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿರುವ ಬಗ್ಗೆ ಆಕ್ಷೇಪಣೆ ಇದ್ದು, ಈ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ವರದಿಯ ಅನುಸಾರ ಸಿಬ್ಬಂದಿ ಕಡಿತಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಹಣಕಾಸು ವಿಭಾಗದ ಕುಲಸಚಿವ ಮಂಜುನಾಥ್ ತಿಳಿಸಿದರು.ಕುವೆಂಪು ವಿವಿ ಆರ್ಥಿಕ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಇಡೀ ವಿಶ್ವವಿದ್ಯಾಲಯಕ್ಕೆ ಸೋಲಾರ್ ಪಾರ್ಕ್‌ನಿಂದ ವಿದ್ಯುತ್ ಪಡೆದು ಹೆಚ್ಚಿನ ವಿದ್ಯುತ್ತನ್ನು ಗ್ರಿಡ್ ಗೆ ಯೋಜನೆ ರೂಪಿಸಲಾಗಿದೆ. ನಕಲಿ ಜಾತಿ ಪ್ರಮಾಣ ಪತ್ರ ರದ್ದು ಪ್ರಕರಣದ ಹಿನ್ನೆಲೆಯಲ್ಲಿ ಪ್ರೊ. ಎ.ಷಣ್ಮುಗ ಅವರ ಹೈಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ಕೂಡ ತಡೆಯಾಜ್ಞೆ ನೀಡಿದೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.