ಏಪ್ರಿಲ್ ೩ರಂದು ಬೆಳಗ್ಗೆ ೧೦೮ ಸುಮಂಗಲಿಯರೊಂದಿಗೆ ಗಂಗಾಕಳಶ ಪ್ರವೇಶ ಕಾರ್ಯಕ್ರಮ ಜರುಗಲಿದ್ದು, ಕಳಸಪೂಜೆ, ವೇದಪಾರಾಯಣ, ಗಂಗಾಪೂಜೆ, ಗೋಪೂಜೆ ನಡೆಯಲಿದೆ. ಮಧ್ಯಾಹ್ನ ಹಾಗೂ ಸಂಜೆ ಅಧಿವಾಸ ಪೂಜೆ, ಅಧಿವಾಸ ಹೋಮ, ನಿದ್ರಾಕಳಶ ಪೂಜೆ, ವಾಸ್ತು ಹಾಗೂ ಕ್ಷೇತ್ರಪಾಲ ಬಲಿ ಕಾರ್ಯಕ್ರಮಗಳು ನೆರವೇರಲಿವೆ. ಸಂಜೆ ಧನಸಹಾಯ ಮಾಡಿದ ದಾನಿಗಳ ಸನ್ಮಾನ ನಡೆಯಲಿದ್ದು, ಬಳಿಕ ಪೊಳಲಿ, ಭಂಟವಾಳ ತಾಲೂಕಿನ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಭಕ್ತರನ್ನು ಆಧ್ಯಾತ್ಮಿಕ ತೊಳಲಿನಲ್ಲಿ ಮುಳುಗಿಸಲಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ಕರಗೂರು ಕೂಡಿಗೆ (ಪಾಲಹಳ್ಳಿ) ಗ್ರಾಮದಲ್ಲಿ ಶ್ರೀ ವಾಯುಪುತ್ರ ಸೇವಾ ಸಮಿತಿ ವತಿಯಿಂದ ೧೬ ಅಡಿ ಎತ್ತರದ ಏಕಶಿಲಾ ಶ್ರೀ ಆಂಜನೇಯಸ್ವಾಮಿ ನೂತನ ವಿಗ್ರಹದ ಅದ್ಧೂರಿ ಪ್ರತಿಷ್ಠಾಪನಾ ಮಹೋತ್ಸವವು ಏಪ್ರಿಲ್ ೨ರಿಂದ ೪ರವರೆಗೆ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದೊಂದಿಗೆ ನಡೆಯಲಿದೆ ಎಂದು ವಾಯುಪುತ್ರ ಸೇವಾಸಮಿತಿ ಅಧ್ಯಕ್ಷ ಬಿ. ಎಸ್. ತೇಜಸ್ವಿ ಹಾಗೂ ಗೌರವಾಧ್ಯಕ್ಷ ಕೆ.ಕೆ. ರಾಮಚಂದ್ರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಗ್ರಾಮದೆಲ್ಲೆಡೆ ಈಗಾಗಲೇ ಹಬ್ಬದ ಸಡಗರ ಮನೆ ಮಾಡಿದ್ದು, ಭಕ್ತರ ಆಗಮನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.ಈ ಮಹೋತ್ಸವವು ಮಂಜುನಾಥ ಶರ್ಮಾ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಮೂರು ದಿನಗಳ ಕಾಲ ವಿವಿಧ ವೇದಿಕೆ ಹಾಗೂ ಆಧ್ಯಾತ್ಮಿಕ ವಿಧಿವಿಧಾನಗಳು ಕ್ರಮಬದ್ಧವಾಗಿ ನೆರವೇರಲಿವೆ ಎಂದರು. ಏಪ್ರಿಲ್ ೨ರಂದು ಬೆಳಗ್ಗೆ ಗಣೇಶ ಪ್ರಾರ್ಥನೆ, ಪೂಜೆ, ಪುಣ್ಯಾಹವಾಚನ, ಚಪ್ಪರ ಪೂಜೆ, ಮಹಾಸಂಕಲ್ಪ, ಕಂಕಣಧಾರಣೆ, ಪಂಚಗವ್ಯ ಮೇಳನ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಪಂಚಗವ್ಯ ಹೋಮ, ಪೀಠಿಕಾಶುದ್ಧಿ, ಕಳಸ ಸ್ಥಾಪನೆ, ವಾಸ್ತು ಹೋಮ, ರಕ್ಷೋಗ್ನ ಹೋಮ ನಡೆಯಲಿದ್ದು, ಬಳಿಕ ದಾನಿಗಳ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ರಾತ್ರಿ ವೇಳೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ. ಆರ್‌. ಪೇಟೆ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತರನ್ನು ರಂಜಿಸಲಿದೆ ಎಂದು ಹೇಳಿದರು.

ಏಪ್ರಿಲ್ ೩ರಂದು ಬೆಳಗ್ಗೆ ೧೦೮ ಸುಮಂಗಲಿಯರೊಂದಿಗೆ ಗಂಗಾಕಳಶ ಪ್ರವೇಶ ಕಾರ್ಯಕ್ರಮ ಜರುಗಲಿದ್ದು, ಕಳಸಪೂಜೆ, ವೇದಪಾರಾಯಣ, ಗಂಗಾಪೂಜೆ, ಗೋಪೂಜೆ ನಡೆಯಲಿದೆ. ಮಧ್ಯಾಹ್ನ ಹಾಗೂ ಸಂಜೆ ಅಧಿವಾಸ ಪೂಜೆ, ಅಧಿವಾಸ ಹೋಮ, ನಿದ್ರಾಕಳಶ ಪೂಜೆ, ವಾಸ್ತು ಹಾಗೂ ಕ್ಷೇತ್ರಪಾಲ ಬಲಿ ಕಾರ್ಯಕ್ರಮಗಳು ನೆರವೇರಲಿವೆ. ಸಂಜೆ ಧನಸಹಾಯ ಮಾಡಿದ ದಾನಿಗಳ ಸನ್ಮಾನ ನಡೆಯಲಿದ್ದು, ಬಳಿಕ ಪೊಳಲಿ, ಭಂಟವಾಳ ತಾಲೂಕಿನ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಭಕ್ತರನ್ನು ಆಧ್ಯಾತ್ಮಿಕ ತೊಳಲಿನಲ್ಲಿ ಮುಳುಗಿಸಲಿದೆ ಎಂದು ಹೇಳಿದರು.

ಏಪ್ರಿಲ್ ೪ರಂದು ಮುಂಜಾನೆ ನೇತ್ರೋನ್ನತ, ಅಭಿಷೇಕ, ತತ್ವನ್ಯಾಸ, ಕಲಾನ್ಯಾಸ ಹೋಮ, ಆಂಜನೇಯ ಗಾಯತ್ರಿ ಹೋಮ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಲಿದ್ದು, ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಗುತ್ತದೆ. ಬೆಳಗ್ಗೆ ೧೦.೩೦ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ ಸೇರಿದಂತೆ ಹಲವು ಧಾರ್ಮಿಕ ಗುರುಗಳು ಆಗಮಿಸಲಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಸಚಿವ ಕೃಷ್ಣ ಬೈರೇಗೌಡ, ಬಿಜೆಪಿ ನಾಯಕ ಸಿ.ಟಿ. ರವಿ, ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಸೇರಿದಂತೆ ಅನೇಕ ರಾಜಕೀಯ ಹಾಗೂ ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಗ್ರಾಮದ ದಾನಿಗಳು, ಉದ್ಯಮಿಗಳು ಹಾಗೂ ಸಮಾಜ ಸೇವಕರು ಈ ಮಹೋತ್ಸವಕ್ಕೆ ಧನಸಹಾಯ ನೀಡಿದ್ದು, ವಿಶೇಷವಾಗಿ ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮವೂ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ವ್ಯವಸ್ಥೆ ಇರುತ್ತದೆ. ಈ ಭವ್ಯ ಮಹೋತ್ಸವವನ್ನು ಯಶಸ್ವಿಗೊಳಿಸಲು ಗ್ರಾಮಸ್ಥರು ಸಮಗ್ರವಾಗಿ ಕೈಜೋಡಿಸಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ವಾಯುಪುತ್ರ ಸೇವಾ ಸಮಿತಿಯ ನಿರ್ದೇಶಕ ಎಚ್. ಡಿ. ಜೈಕುಮಾರ್, ಕೆ.ಎಸ್. ರವಿಕುಮಾರ್ ಇತರರು ಉಪಸ್ಥಿತರಿದ್ದರು.