ಹಿರಿಯ ಜೀವಿಗಳಿಗಿದೆ ಕಾನೂನು ರಕ್ಷೆ: ನ್ಯಾ. ಆರಿಫುಲ್ಲಾ

| Published : Oct 11 2024, 11:53 PM IST

ಸಾರಾಂಶ

ಭಾರತ ಸರ್ಕಾರ ಹಿರಿಯ ನಾಗರಿಕರ ರಕ್ಷಣೆಗಾಗಿ ಹಲವು ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳ ನೆರವು ಪಡೆದುಕೊಂಡು ನೆಮ್ಮದಿಯಿಂದ ಉತ್ತಮ ಜೀವನ ಸಾಗಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಎಫ್. ಮಹಮ್ಮದ್ ಆರಿಫುಲ್ಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಭಾರತ ಸರ್ಕಾರ ಹಿರಿಯ ನಾಗರಿಕರ ರಕ್ಷಣೆಗಾಗಿ ಹಲವು ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳ ನೆರವು ಪಡೆದುಕೊಂಡು ನೆಮ್ಮದಿಯಿಂದ ಉತ್ತಮ ಜೀವನ ಸಾಗಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಎಫ್. ಮಹಮ್ಮದ್ ಆರಿಫುಲ್ಲ ತಿಳಿಸಿದರು. ನಗರದ ಹಿರಿಯರ ಮನೆ ಶಾರದ ವೃದ್ದಾಶ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘದ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಹಿರಿಯ ನಾಗರಿಕರ ದಿನಾಚರಣೆ ಮತ್ತು ಮಾನಸಿಕ ಸ್ವಾಸ್ತ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬ ಅಥವಾ ಸಮಾಜ ಅಭಿವೃದ್ದಿಯಾಗಬೇಕಾದರೆ ಹಿರಿಯ ಮಾರ್ಗದರ್ಶನ ಅವಶ್ಯಕ. ಸರ್ಕಾರ ಅವರ ರಕ್ಷಣೆಗೆಂದೆ ಕಾನೂನುಗಳನ್ನು ಜಾರಿ ಮಾಡಿದ್ದು, ಹಿರಿಯ ನಾಗರೀಕರ ಹಿತರಕ್ಷಣೆಯನ್ನು ಕಾಯ್ದಿರಿಸುವ ನಿಟ್ಟಿನಲ್ಲಿ 2017ನೇ ಇಸವಿಯಲ್ಲಿ ಹಿರಿಯ ನಾಗರೀಕ ಸಂರಕ್ಷಣಾ ಕಾಯ್ದೆ ರಚನೆಯಾಗಿದ್ದು ತಮ್ಮ ಮಕ್ಕಳು ಅಥವಾ ಸೊಸೆಯಂದಿರಿಂದ ತಾವು ಶೋಷಣೆಗೆ ಒಳಗಾದ ಪಕ್ಷದಲ್ಲಿ ಈ ಕಾಯ್ದೆಯ ಅನುಸಾರ ಸೂಕ್ತ ರಕ್ಷಣೆ ಪಡೆದುಕೊಳ್ಳಬಹುದು. ಮಕ್ಕಳು ಇಳಿ ವಯಸ್ಸಿನಲ್ಲಿ ನಿಮ್ಮನ್ನು ನೋಡಿಕೊಳ್ಳದಿದ್ದರೆ ತಮ್ಮಿಂದ ಮಕ್ಕಳಿಗೆ ವರ್ಗಾವಣೆಯಾದ ಆಸ್ತಿಯನ್ನು ಮರಳಿ ಪಡೆಯುವ ವ್ಯವಸ್ಥೆಯಿದ್ದು ಈ ಸಂಬಂಧ ಅರ್ಜಿಗಳನ್ನು ತಾಲೂಕು ಕಾನೂನು ಸೇವಾ ಸಮಿತಿಗೆ ಸಲ್ಲಿಸಿದರೆ ನಿಮ್ಮ ನೆರವಿಗೆ ಸದಾ ಸಿದ್ದವಿರುತ್ತೇವೆ ಎಂದರು. ಅಧಿಕ ಸಿವಿಲ್ ನ್ಯಾಯಾಧೀಶರಾದ ಜಿ.ಎಸ್. ಮಧುಶ್ರೀ ಮಾತನಾಡಿ, ಸಮಾಜ ಅಭಿವೃದ್ದಿಗೆ ಹಿರಿಯರ ಅನುಭವ ಮುಖ್ಯವಾಗಿದ್ದು, ಕಿರಿಯರು ಭಾವನಾತ್ಮಕವಾಗಿ ಅವರನ್ನು ಅರ್ಥಮಾಡಿಕೊಂಡು ಶಾಂತಿಯುತ ಸಮಾಜ ನಿರ್ಮಾಣ ಮಾಡಬೇಕೆಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎನ್. ಅಜಯ್ ಮಾತನಾಡಿ ಕುಟುಂಬಗಳ ಒಡಕಿನಿಂದ ಎಷ್ಟೋ ಹಿರಿಯರು ತಮ್ಮ ಮಕ್ಕಳೊಂದಿಗೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಲ್ಲಿ ತಮ್ಮ ತಂದೆ ತಾಯಿ ಎಂಬ ಕನಿಷ್ಠ ಸೌಜನ್ಯ ಇಲ್ಲದಂತಾಗಿದ್ದು ಅವರು ನೀಡಿದಂತಹ ಮಮತೆ, ವಾತ್ಸಲ್ಯ ಕಣ್ಮರೆಯಾಗುತ್ತಿದೆ. ತಂದೆ ತಾಯಂದಿರಿರುವ ಸೊಸೆ ಮತ್ತು ಅಳಿಯನನ್ನು ಮಗಳು, ಮಗನಂತೆ ಭಾವಿಸಿದಾಗ ವೃದ್ದಾಶ್ರಮಗಳಿಗೆ ಬರುವ ಅವಶ್ಯಕತೆ ಇರುವುದಿಲ್ಲ. ಯುವಪೀಳಿಗೆ ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದ್ದು ಯಾರು ಹಿರಿಯರನ್ನು ನಿರ್ಲಕ್ಷಿಸದೆ ಪ್ರೀತಿಯಿಂದ ಕಾಣಬೇಕೆಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಬಿ. ಮಲ್ಲಿಕಾರ್ಜುನಯ್ಯ, ಹಿರಿಯರ ಮನೆ ಶಾರದ ವೃದ್ದಾಶ್ರಮದ ಅಧ್ಯಕ್ಷ ವಿ.ಆರ್. ರಾಮಣ್ಣ, ನಿರ್ದೇಶಕ ತರಕಾರಿ ಗಂಗಾಧರ್, ಹಿರಿಯ ವಕೀಲರಾದ ಜಯದೇವ್, ಗುರುರಾಜ್, ಬದುಕು ಸಂಸ್ಥೆಯ ನಂದಕುಮಾರ್, ವಕೀಲೆ ಶ್ವೇತಾ, ಮೇಲ್ವಿಚಾರಕಿ ಕಲ್ಪನಾ ಸೇರಿದಂತೆ ಎಲ್ಲಾ ಹಿರಿಯ ವೃದ್ದರು ಭಾಗವಹಿಸಿದ್ದರು.