ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮನುಷ್ಯ ಒಗ್ಗಟ್ಟಿನಿಂದ ಬದುಕಬೇಕು ಹಾಗೂ ಹಿರಿಯರು ಕಿರಿಯರಿಗೆ ಮಾರ್ಗದರ್ಶಕನಾಗಿ ಸಮಾಜವನ್ನು ತಿದ್ದುವಂತಹ ಕೆಲಸವನ್ನು ಮಾಡಬೇಕು ಹಾಗೂ ಸದಾ ನಗು ನಗುತ್ತಾ ಬದುಕಿದರೆ ಆರೋಗ್ಯಯುತವಾದ ಜೀವನವನ್ನು ಸಾಗಿಸಬಹುದು. ಮನುಷ್ಯ ಕ್ರಿಯಾಶೀಲನಾಗಿದ್ದರೆ ಕಾಯಿಲೆಗಳಿಂದ ಹೊರಬಂದು ನೆಮ್ಮದಿಯ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ತಾಲೂಕು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ನವಲಗುಂದ ತಿಳಿಸಿದರು.ತಾಲೂಕಿನ ಬಾಣಾವರದ ಹಿರಿಯ ನಾಗರಿಕರ ವೇದಿಕೆ ಸಮಾರಂಭ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸಾಹಿತ್ಯ, ಸಂಗೀತ, ಕಲೆ ಇವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಈ ಸಮಾಜಕ್ಕೆ ಪ್ರೇರಣೆಯಾಗುವಂತಹ ಕೆಲಸವನ್ನ ಮಾಡುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಿದಾಗ ಯುವ ಜನತೆಯು ಸಹ ಸಮಾಜದಲ್ಲಿ ಉತ್ತಮ ಜೀವನವನ್ನು ಸಾಗಿಸುವುದರ ಜೊತೆಗೆ ಸಮಾಜಕ್ಕೆ ಆಸ್ತಿಯಾಗಿ ಬದುಕುತ್ತಾರೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಣಾವರ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪರಮೇಶ್ವರ್, ಮನುಷ್ಯ ನಿವೃತ್ತಿ ನಂತರ ಜೀವನವನ್ನು ಸಹ ಸಮಾಜಕ್ಕಾಗಿ ಮುಡುಪಾಗಿಡಬೇಕು ಮತ್ತು ತಾನು ಹುಟ್ಟಿ ಬೆಳೆದ ಗ್ರಾಮಕ್ಕೆ ತನ್ನ ಕೈಲಾದ ಸೇವೆಯನ್ನು ಸಲ್ಲಿಸಬೇಕು ಹಾಗೂ ಮನುಷ್ಯನ ಮನಸ್ಸಿನಲ್ಲಿ ಕ್ರಿಯಾತ್ಮಕವಾದಂತಹ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಸಮಾಜದ ಏಳಿಗೆಗಾಗಿ ದುಡಿದಾಗ ಸಮಾಜ ಸುಧಾರಣೆಯಾಗುವುದರ ಜೊತೆಗೆ ತಾನು ಸಹ ಆರೋಗ್ಯವಂತ ಜೀವನವನ್ನು ಸಾಗಿಸಲು ಅನುಕೂಲವಾಗುತ್ತದೆ. ಅಲ್ಲದೆ ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ನಮ್ಮ ನಡೆ ನುಡಿ ಆಚಾರ ವಿಚಾರಗಳು ಯುವಜನತೆಗೆ ಪ್ರೇರಕವಾಗಿ ಇರಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸೇತುರಾಮ್, ನಿವೃತ್ತ ಶಿಕ್ಷಕ ಶಿವಶಂಕರ್, ಮಾಜಿ ತಾ.ಪಂ ಸದಸ್ಯರಾದ ರವಿಶಂಕರ್, ಬಿ ಆರ್ ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಬಿ ಆರ್ ಸುರೇಶ್, ಸೈಯದ್ ಆಸಿಫ್ ಮೋಮಿನ್ ಮಾಜಿ ಅಧ್ಯಕ್ಷ ಪಿ ಆರ್ ನಾಗೇಂದ್ರ, ಮಾಜಿ ಸದಸ್ಯ ಪ್ಯಾರು ಸಾಹೇಬ್, ಅಹಿಂದ ಜಿಲ್ಲಾಧ್ಯಕ್ಷ ಬಿ ಆರ್ ಲಕ್ಷ್ಮೀಶ್, ಮುಸ್ಲಿಂ ಸಮಾಜದ ಮಾಜಿ ಅಧ್ಯಕ್ಷ ಆರಿಫ್ ಸಾಬ್, ಕೆ ಸಿ ಖಾದರ್ ಭಾಷಾ, ಫಿಯಾಮಸಾಬ್ ಮೊಹಮ್ಮದ್, ಇಲಿಯಾಜ್ ಸಾಬ್, ಹಿರಿಯ ನಾಗರಿಕ ವೇದಿಕೆಯ ಖಜಾಂಚಿಗಳಾದ ವೆಂಕಟೇಶ್ ಲಾಡ್ ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕ ಹಾಗೂ ಹಿರಿಯ ನಾಗರಿಕ ವೇದಿಕೆಯ ಕಾರ್ಯದರ್ಶಿಗಳಾದ ಪಶುಪತಿ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.