ಈಗ ಆಯ್ಕೆಯಾದ ನಂತರ ಐದು ವರ್ಷ ಚುನಾಯಿತಪ್ರತಿನಿಧಿಗಳು ಏನು ಮಾಡಿದರೂ ಕೇಳುವಂತಿಲ್ಲ ಎಂಬಂತಿದೆ. ಇದು ಹೋಗಬೇಕು. ಅವರು ಮತದಾರರಿಗೆ ಉತ್ತರದಾಯಿಗಳಾಗಿರಬೇಕು. ವಾಪಸ್ ಕರೆಸಿಕೊಳ್ಳುವ ಅಧಿಕಾರ ಇದ್ದಲ್ಲಿ ಭಯದಿಂದ ಜನರ ಕೆಲಸ ಮಾಡುತ್ತಾರೆ. ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಗುಲಾಮರಾಗಿರಬೇಕೆ ಹೊರತು ಪ್ರಜೆಗಳನ್ನೇ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಬಾರದು.
ಕನ್ನಡಪ್ರಭ ವಾರ್ತೆ ಮೈಸೂರು
ಮತದಾರರಿಗೆ ಚುನಾಯಿತ ಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಅಧಿಕಾರ ಇರಬೇಕು ಎಂದು ಖ್ಯಾತ ಚಲನಚಿತ್ರ ನಟ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.ನಗರದ ವಾಲ್ಮೀಕಿ ರಸ್ತೆಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ದಾರಿ ಫೌಂಡೇಷನ್ ಗುರುವಾರ ಏರ್ಪಡಿಸಿದ್ದ ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಯ ಜವಾಬ್ದಾರಿ ಯುವಶಕ್ತಿಯ ಕೈಯಲ್ಲಿ’ ಕುರಿತ ಮುಕ್ತ ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅದೇ ರೀತಿ ಗೆಲುವಿಗೆ ಚಲಾಯಿತ ಮತಗಳ ಪೈಕಿ ಶೇ.50ರಷ್ಟನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಈಗ ಆಯ್ಕೆಯಾದ ನಂತರ ಐದು ವರ್ಷ ಚುನಾಯಿತಪ್ರತಿನಿಧಿಗಳು ಏನು ಮಾಡಿದರೂ ಕೇಳುವಂತಿಲ್ಲ ಎಂಬಂತಿದೆ. ಇದು ಹೋಗಬೇಕು. ಅವರು ಮತದಾರರಿಗೆ ಉತ್ತರದಾಯಿಗಳಾಗಿರಬೇಕು. ವಾಪಸ್ ಕರೆಸಿಕೊಳ್ಳುವ ಅಧಿಕಾರ ಇದ್ದಲ್ಲಿ ಭಯದಿಂದ ಜನರ ಕೆಲಸ ಮಾಡುತ್ತಾರೆ. ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಗುಲಾಮರಾಗಿರಬೇಕೆ ಹೊರತು ಪ್ರಜೆಗಳನ್ನೇ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಬಾರದು ಎಂದು ಅವರು ಮಾರ್ಮಿಕವಾಗಿ ಹೇಳಿದರು.ಈಗ ಶೇ.50 ರಷ್ಚು ಮತದಾನ ಆಗದಿದ್ದರೂ , ಚಲಾಯಿತ ಮತಗಳಲ್ಲಿ ಶೇ.50 ಮತಗಳನ್ನು ಪಡೆಯದಿದ್ದರೂ ಹೆಚ್ಚು ಮತ ಪಡೆದವರನ್ನು ಚುನಾಯಿತ ಎಂದು ಘೋಷಿಸಲಾಗುತ್ತಿದೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ?. ಇದು ತಪ್ಪಬೇಕು. ಗೆಲುವಿಗೆ ಚಲಾಯಿತ ಮತಗಳಲ್ಲಿ ಶೇ.50 ರಷ್ಟು ನಿಗದಿಪಡಿಸಬೇಕು ಎಂದರು.
ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ. ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲತತ್ವಗಳನ್ನು ಬದಲಿಸಲು ಅವಕಾಶವೇ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಜೊತೆಗೆ ಅನಧಿಕೃತವಾಗಿ ಮಾಧ್ಯಮರಂಗವೂ ಇದೆ. ಇತ್ತೀಚೆಗೆ ಧರ್ಮ ಎಂಬ ಮತ್ತೊಂದು ಅಂಗವೂ ಕಾಣಿಸುತ್ತದೆ. ಧರ್ಮ ಇತಿಮಿತಿಯಲ್ಲಿರಬೇಕೆ ಹೊರತು ಅದೇ ಮುಖ್ಯವಾಗಿರಬಾರದು ಎಂದರು.
ಹನ್ನೇರಡನೆ ಶತಮಾನದ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಜೀವನ ದರ್ಶನ ಮಾಡಿಸಿದರು. ಕಳಬೇಡ, ಕೊಲಬೇಡು.... ವಚನದ ಮೂಲಕ ಜೀವನ ಸಂವಿಧಾನ ನೀಡಿದರು. ಮಹಾತ್ಮಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ಸ್ವಾತಂತ್ರ್ಯ ಗಳಿಸಿಕೊಟ್ಟರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಇಡೀ ವಿಶ್ವದಲ್ಲಿಯೇ ಅತ್ಯುತ್ತಮವಾದ ಲಿಖಿತ ಸಂವಿಧಾನ ರಚಿಸಿಕೊಟ್ಟರು. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.ಸರ್ಕಾರಗಳು ಉಚಿತ ಗ್ಯಾರಂಟಿಗಳನ್ನು ನೀಡುವ ಬದಲು ಎಲ್ಲರಿಗೂ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಶಾಲೆಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳನ್ನು ಬಲಪಡಿಸಬೇಕು. ರೈತರಿಗೆ ಬೆಂಬಲ ಬೆಲೆ ಬದಲು ಸಮರ್ಪಕವಾಗಿ ನೀರು ಹಾಗೂ ವಿದ್ಯುತ್ ಪೂರೈಸಬೇಕು ಎಂದು ಅವರು ಸಲಹೆ ಮಾಡಿದರು.
ಹಿಂದಿ ರಾಷ್ಟ್ರೀಯ ಭಾಷೆ ಇಲ್ಲ. ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಹೇಳಿರುವಂತೆ ಅದು ಕೂಡ ಒಂದು ಭಾಷೆ. ಹೀಗಾಗಿ ಕರ್ನಾಟಕದಲ್ಲಿ ಎಲ್ಲಾ ಹಂತಗಳಲ್ಲೂ ಕನ್ನಡಕ್ಕೆ ಆದ್ಯತೆ ಸಿಗಬೇಕು. ಇಂಗ್ಲಿಷ್ ಅನ್ನು ಕೂಡ ಚೆನ್ನಾಗಿ ಕಲಿಯಬೇಕು ಎಂದು ಅವರು ಸಲಹೆ ಮಾಡಿದರು.ವಿದ್ಯಾರ್ಥಿನಿಯರು ಇಚ್ಚಾಶಕ್ತಿ, ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಚೆನ್ನಾಗಿ ಓದಬೇಕು. ದೇಶಪ್ರೇಮ, ನಾಡಪ್ರೇಮ, ಮಾತೃಭಾಷಾ ಪ್ರೇಮ ಬೆಳೆಸಿಕೊಳ್ಳಬೇಕು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಸಿ. ನಟರಾಜ್ ಮಾತನಾಡಿ, ಪ್ರತಿಯೊಬ್ಬರೂ ಬದ್ಧತೆ, ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು. ಯಾವುದೇ ಹುದ್ದೆಗೆ ಹೋದರೂ ಭ್ರಷ್ಟಾಚಾರಮುಕ್ತವಾಗಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.ಮುಖ್ಯಮಂತ್ರಿಗಳು ರಾಜ್ಯ ಬಜೆಟ್‌ನಲ್ಲಿ ಮಹಾರಾಣಿ ಮೂರು ಕಾಲೇಜುಗಳ ಹಾಸ್ಟೆಲ್ ನಿರ್ಮಾಣಕ್ಕೆ 291 ಕೋಟಿ ರು. ನೀಡಿದ್ದು, ನಮ್ಮ ಕಾಲೇಜಿಗೆ 50 ಕೋಟಿ ರು. ದೊರೆತಿದೆ. ಈ ರೀತಿಯ ಮೂಲಸೌಕರ್ಯ ಕಲ್ಪಿಸುವ ಮೂಲಕ ರಾಜ್ಯ ಸರ್ಕಾರ ಗ್ರಾಮೀಣ ಬಡ ಹಾಗೂ ಮಧ್ಯಮವರ್ಗದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ದಾರಿ ಫೌಂಡೇಷನ್ ಅಧ್ಯಕ್ಷ ಎಲ್. ರಂಗಯ್ಯ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯದರ್ಶಿ ತಗಡೂರು ವೀರೇಶ್‌ಕುಮಾರ್ ಮಹಾಮನೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಚಾಲಕ ಪ್ರಭಾಕರ್, ಐಕ್ಯೂಎಸಿ ಸಂಚಾಲಕ ಡಾ.ಎಸ್. ಮುತ್ತುರಾಜ, ಖಜಾಂಚಿ ರಾಘವೇಂದ್ರ, ಮಲ್ಲಣ್ಣ, ತೋಂಟೇಶ್ ಮೊದಲಾದವರು ಇದ್ದರು. ಐಕ್ಯತಾ ಪ್ರಾರ್ಥಿಸಿದರು. ಮೈಸೂರು ಎಂ. ಮಹಾಲಿಂಗ ಅವರು ನಾಡಗೀತೆ ಹಾಗೂ ಸಂವಿಧಾನಗೀತೆ ಹಾಡಿದರು. ವಿದ್ಯಾರ್ಥಿನಿ ಅಧ್ಯಕ್ಷೆ ಎಸ್.ಜೆ. ಸಿಂಚನಾ ಸ್ವಾಗತಿಸಿದರು. ಕಾರ್ಯದರ್ಶಿ ಸೈಯದಾ ನೂರೈನ್ ವಂದಿಸಿದರು. ತನುಶ್ರೀ ವಂದಿಸಿದರು. ಪಲ್ಲವಿ ಅತಿಥಿಗಳನ್ನು ಪರಿಚಯಿಸಿದರು.ಸಂವಾದದಲ್ಲಿ ಪ್ರಶ್ನೆಗಳ ಸುರಿಮಳೆ!ಉದ್ಘಾಟನಾ ಭಾಷಣದ ನಂತರ ಮುಖ್ಯಮಂತ್ರಿ ಚಂದ್ರು ಅವರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿರು ಮಾತ್ರವಲ್ಲದೇ ಕೆಲ ಅಧ್ಯಾಪಕರು ಕೂಡ ಪ್ರಶ್ನೆಗಳನ್ನು ಕೇಳಿದರು.
ಚಂದ್ರು ಅವರ ಪಕ್ಷಾಂತರ, ಆಮ್ ಆದ್ಮಿಪಾರ್ಟಿಯ ನಾಯಕರ ಮೇಲಿನ ಕೋರ್ಟ್ ಪ್ರಕರಣಗಳು, ಮೀಸಲಾತಿ, ಚಲನಚಿತ್ರಗಳಲ್ಲಿ ಮಹಿಳಾ ಕಲಾವಿದರಿಗೆ ಇರುವ ರಕ್ಷಣೆ, ಮರ್ಯಾದೆಗೇಡು ಹತ್ಯೆ ಮೊದಲಾದ ವಿಷಯಗಳ ಬಗ್ಗೆ ಪ್ರಶ್ನೆಗಳಿದ್ದವು. ಕೋಮುವಾದ, ಕುಟುಂಬ ರಾಜಕಾರಣ ಹೋಗಬೇಕು. ಅನ್ನದಾನ, ಗೋದಾನ, ಭೂದಾನ, ಕನ್ಯಾದಾನದಂತೆ ಮತದಾನ ಕೂಡ ಮುಖ್ಯ, 18 ನೇ ವಯಸ್ಸಿಗೆ ಮತದಾನದ ಹಕ್ಕು ಪಡೆದಿರುವ ಯುವಜನತೆ ಇದನ್ನು ಅರ್ಥ ಮಾಡಿಕೊಂಡು ಭ್ರಷ್ಟಮುಕ್ತ ಸರ್ಕಾರ ತರುವ ಮನಸ್ಸು ಮಾಡಬೇಕು ಎಂಬುದು ಮುಖ್ಯಮಂತ್ರಿ ಚಂದ್ರು ಅವರ ಉತ್ತರವಾಗಿತ್ತು.