ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮನ್‌ಮುಲ್ ಚುನಾವಣಾ ಅಖಾಡ ಇದೀಗ ಸಿದ್ಧಗೊಂಡಿದೆ. ಒಟ್ಟು ೨೬ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಣಾಂಗಣದಲ್ಲಿ ಇರುವವರ ಪೈಕಿ ೧೨ ಮಂದಿ ಮಾತ್ರ ಹೊಸಬರಾಗಿದ್ದು, ಹಿಂದಿನ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದವರಲ್ಲಿ ಶೀಳನೆರೆ ಅಂಬರೀಶ್ ಹೊರತು ಪಡಿಸಿದಂತೆ ಉಳಿದವರೆಲ್ಲರೂ ಪುನರಾಯ್ಕೆ ಬಯಸಿ ಚುನಾವಣೆ ಎದುರಿಸುವುದಕ್ಕೆ ಸಜ್ಜಾಗಿದ್ದಾರೆ.ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಹೋದರನ ಮಗ ಸಿ. ಶಿವಕುಮಾರ್, ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ. ಉದಯ್ ಸಂಬಂಧಿ ಎಂ.ಕೆ.ಹರೀಶ್ ಬಾಬು ಅವರು ಪ್ರಭಾವಿಗಳಾಗಿ ಕಣದೊಳಗೆ ಕಾಣಿಸಿಕೊಂಡಿದ್ದಾರೆ.
ಕಣದಲ್ಲಿ ಏಕೈಕ ಮಹಿಳೆ:ನಿರ್ದೇಶಕ ಸ್ಥಾನಗಳಿಗೆ ಜಿಲ್ಲೆಯಿಂದ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಮಂಡ್ಯ ತಾಲೂಕಿನಿಂದ ಜಿ.ಎಸ್. ಪುಷ್ಪಾವತಿ, ಕೆ.ಆರ್.ಪೇಟೆಯಿಂದ ಕಲ್ಪನಾ ಅವರು ಕಣದಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ಕಣದಲ್ಲಿ ಏಕೈಕ ಮಹಿಳಾ ಅಭ್ಯರ್ಥಿಯಾಗಿ ಹಾಲಿ ನಿರ್ದೇಶಕಿಯಾಗಿರುವ ಮದ್ದೂರು ತಾಲೂಕಿನ ಎಂ.ರೂಪಾ ಉಳಿದುಕೊಂಡಿದ್ದಾರೆ.
ಮರು ಆಯ್ಕೆ ಬಯಸಿದವರು:ಹಿಂದಿನ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದ ಮಂಡ್ಯ ತಾಲೂಕಿನ ಬಿ.ಆರ್.ರಾಮಚಂದ್ರ, ಎಂ.ಎಸ್.ರಘುನಂದನ್, ಯು.ಸಿ. ಶಿವಕುಮಾರ್, ಮದ್ದೂರು ತಾಲೂಕಿನಿಂದ ಎಸ್.ಪಿ.ಸ್ವಾಮಿ, ಎಂ.ರೂಪಾ, ಮಳವಳ್ಳಿ ತಾಲೂಕಿನ ವಿ.ಎಂ.ವಿಶ್ವನಾಥ್, ಪಾಂಡವಪುರ ತಾಲೂಕಿನ ಕೆ.ರಾಮಚಂದ್ರ, ಶ್ರೀರಂಗಪಟ್ಟಣದ ಬಿ.ಬೋರೇಗೌಡ, ಕೆ.ಆರ್.ಪೇಟೆ ತಾಲೂಕಿನಿಂದ ಶಾಸಕ ಎಚ್.ಟಿ. ಮಂಜು, ಕೆ.ರವಿ, ನಾಗಮಂಗಲ ತಾಲೂಕಿನಿಂದ ನೆಲ್ಲೀಗೆರೆ ಬಾಲು ಅವರು ಮರು ಆಯ್ಕೆ ಬಯಸಿ ಚುನಾವಣಾ ಕಣದಲ್ಲಿದ್ದಾರೆ.
ಹೊಸಬರು ಯಾರು?:ಹೊಸ ಮುಖಗಳಾಗಿ ಮಂಡ್ಯ ತಾಲೂಕಿನಿಂದ ಕೆ.ರಾಜು, ವಿಜಯಕುಮಾರ್, ಮದ್ದೂರು ತಾಲೂಕಿನಿಂದ ಬಿ.ಅನಿಲ್‌ಕುಮಾರ್, ಎಸ್.ಮಹೇಶ, ಎಂ.ಕೆ.ಹರೀಶ್‌ಬಾಬು, ಮಳವಳ್ಳಿ ತಾಲೂಕಿನಿಂದ ಡಿ.ಕೃಷ್ಣೇಗೌಡ, ಪಾಂಡವಪುರ ತಾಲೂಕಿನಿಂದ ಸಿ.ಶಿವಕುಮಾರ್, ಶ್ರೀರಂಗಪಟ್ಟಣದಿಂದ ಎಂ.ಕಿಶೋರ್ (ಕಿರಣ್), ಎಚ್.ಎಂ.ಪುಟ್ಟಸ್ವಾಮಿಗೌಡ, ಕೆ.ಆರ್.ಪೇಟೆ ತಾಲೂಕಿನಿಂದ ಎನ್.ಎಸ್.ಮಹೇಶ, ನಾಗಮಂಗಲ ತಾಲೂಕಿನಿಂದ ಎನ್.ಅಪ್ಪಾಜಿಗೌಡ, ದೇವೇಗೌಡ ಅಖಾಡಕ್ಕಿಳಿದಿದ್ದಾರೆ.
ನಾಗಮಂಗಲ ತಾಲೂಕಿನಿಂದ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿ ನಂತರದಲ್ಲಿ ವಜಾಗೊಂಡಿದ್ದ ನೆಲ್ಲೀಗೆರೆ ಬಾಲು ಸ್ಥಾನಕ್ಕೆ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಲಕ್ಷ್ಮೀನಾರಾಯಣ ಮತ್ತೆ ಚುನಾವಣೆಗೆ ರೆಡಿಯಾಗಿದ್ದಾರೆ. ಚುನಾವಣೆಯಲ್ಲಿ ಸೋತಿದ್ದ ಮದ್ದೂರು ತಾಲೂಕಿನ ಕದಲೂರು ರಾಮಕೃಷ್ಣ, ಕೆ.ಆರ್.ಪೇಟೆ ತಾಲೂಕಿನ ಎಂ.ಬಿ.ಹರೀಶ್ ಇನ್ನೊಮ್ಮೆ ರಣಾಂಗಣಕ್ಕಿಳಿದು ತೊಡೆ ತಟ್ಟಿದ್ದಾರೆ.ಒಬ್ಬರು ಶಾಸಕ ಸ್ಥಾನ, ಇಬ್ಬರಿಗೆ ಸೋಲು:
ಹಾಲಿ ಮನ್‌ಮುಲ್ ನಿರ್ದೇಶಕರಾಗಿದ್ದವರ ಪೈಕಿ ಎಚ್.ಟಿ.ಮಂಜು ಕೆ.ಆರ್.ಪೇಟೆ ಶಾಸಕರಾಗಿದ್ದರೆ, ಮಂಡ್ಯ ಕ್ಷೇತ್ರದಿಂದ ಬಿ.ಆರ್. ರಾಮಚಂದ್ರು ಮತ್ತು ಮದ್ದೂರು ಕ್ಷೇತ್ರದಿಂದ ಎಸ್.ಪಿ.ಸ್ವಾಮಿ ಅವರು ಕಳೆದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. ಮನ್‌ಮುಲ್‌ಗೆ ಎರಡು ಬಾರಿ ಅಧ್ಯಕ್ಷರಾಗಿರುವ ಬಿ.ಬೋರೇಗೌಡ ಮತ್ತು ಒಂದೊಂದು ಬಾರಿ ಅಧ್ಯಕ್ಷರಾಗಿದ್ದ ಎಂ.ಬಿ.ಹರೀಶ್, ಬಿ.ಆರ್.ರಾಮಚಂದ್ರ, ಕದಲೂರು ರಾಮಕೃಷ್ಣ ಮತ್ತೆ ಅಧಿಕಾರದ ಆಸೆಗೊಳಗಾಗಿ ಚುನಾವಣೆ ಎದುರಿಸುತ್ತಿದ್ದಾರೆ.ಪ್ರಭಾವಿಗಳಿಗೆ ಪ್ರತಿಷ್ಠೆ:
ಹೊಸ ಮುಖಗಳಲ್ಲಿ ಯಾರು ಯಾರನ್ನು ಮಣಿಸುವರೆಂಬುದು ತೀವ್ರ ಕುತೂಹಲ ಕೆರಳಿಸಿದೆ. ಮುಖ್ಯವಾಗಿ ನಾಗಮಂಗಲ ತಾಲೂಕಿನಿಂದ ಎನ್.ಅಪ್ಪಾಜಿಗೌಡ, ಮದ್ದೂರು ತಾಲೂಕಿನಿಂದ ಎಂ.ಕೆ.ಹರೀಶ್‌ಬಾಬು, ಪಾಂಡಪುರ ತಾಲೂಕಿನ ಸಿ.ಶಿವಕುಮಾರ್ ಇದೇ ಮೊದಲ ಬಾರಿಗೆ ಮನ್‌ಮುಲ್ ರಣಾಂಗಣ ಪ್ರವೇಶಿಸಿದ್ದರೂ ಎದುರಾಳಿಗಳಿಗೆ ತೀವ್ರ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಭಾವಿ ಅಭ್ಯರ್ಥಿಗಳಾಗಿರುವುದರಿಂದ ಚುನಾವಣೆಯನ್ನು ಪ್ರತಿಷ್ಠೆಯಾಗಿಯೂ ಪರಿಗಣಿಸಿದ್ದಾರೆ.ಹೆಚ್ಚಿದ ಸಂಘರ್ಷ:
ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಸಂಘರ್ಷಗಳು ನಡೆಯುತ್ತಿವೆ. ಜೆಡಿಎಸ್-ಕಾಂಗ್ರೆಸ್ ನಡುವೆಯೇ ಹೆಚ್ಚು ತಿಕ್ಕಾಟ ನಡೆಯುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ಜೆಡಿಎಸ್ ಅತಿ ಹೆಚ್ಚು ಬಲಹೊಂದಿರುವ ಸಹಕಾರ ಸಂಘಗಳನ್ನು ಅಥವಾ ಸದಸ್ಯರನ್ನು ಅನರ್ಹಗೊಳಿಸುವುದು. ಕೆಲವೆಡೆ ಕೋರಂ ಅಭಾವದ ನಡುವೆಯೂ ಕಾನೂನು ವ್ಯಾಪ್ತಿ ಮೀರಿ ಸಭೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಮನ್‌ಮುಲ್ ಚುನಾವನೆಗೆ ಕಾಂಗ್ರೆಸ್ ತಮಗೆ ಅನುಕೂಲವಾಗುವ ರೀತಿಯಲ್ಲಿ ವಾತಾವರಣ ಸೃಷ್ಟಿಸಿಕೊಳ್ಳುತ್ತಿದೆ ಎಂಬ ಆರೋಪಗಳು ಜೆಡಿಎಸ್-ಬಿಜೆಪಿಯಿಂದ ವ್ಯಕ್ತವಾಗುತ್ತಿವೆ.ಕಳೆದ ಬಾರಿ ಮೊದಲ ಅವಧಿಯಲ್ಲಿ ಮನ್‌ಮುಲ್ ಅಧಿಕಾರ ಜೆಡಿಎಸ್ ವಶವಾಗಿದ್ದರೆ, ಎರಡನೇ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರವನ್ನು ಪಡೆದುಕೊಂಡಿತ್ತು. ಈಗ ಯಾರು ಅಧಿಕಾರ ಹಿಡಿಯುವಲ್ಲಿ ಪಾರಮ್ಯ ಮೆರೆಯುತ್ತಾರೋ ಕಾದುನೋಡಬೇಕಿದೆ.