ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಯಾದಗಿರಿ ಜಿಲ್ಲಾ ಆಮ್ ಆದ್ಮಿ ಪಕ್ಷದ ವತಿಯಿಂದ ರಾಯಚೂರು ಲೋಕಸಭಾ ಚುನಾವಣೆ ಮತ್ತು ಸುರಪುರ ವಿಧಾನಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲಿಸುತ್ತೇವೆ ಎಂದು ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಹೇಳಿದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ಅವರ ಸಮ್ಮುಖದಲ್ಲಿ ಬೆಂಬಲ ಘೋಷಿಸಿ ಮಾತನಾಡಿದ ಅವರು, ಕೇಂದ್ರದ ಇಂಡಿಯಾ ಒಕ್ಕೂಟದ ಹೊಂದಾಣಿಕೆಯಂತೆ ಯಾದಗಿರಿ ಜಿಲ್ಲಾ ಘಟಕವು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿದ್ಯುಕ್ತವಾಗಿ ಬೆಂಬಲ ಘೋಷಿಸಿದ್ದೇವೆ ಎಂದರು.
ಬಿಜೆಪಿಯವರು ಮಂದಿರ, ಮಸೀದಿ, ಹಿಂದೂ, ಮುಸ್ಲಿಮ ವಿಚಾರಗಳನ್ನು ಪ್ರಸ್ತಾಪಿಸಿ ಜನರ ಭಾವನೆಗಳನ್ನು ಕೆರಳಿಸಿ ಮತ ಪಡೆಯಲು ಹವಣಿಸುತ್ತಾರೆ. ಬಡತನ, ಅಭಿವೃದ್ಧಿ, ವಿಚಾರಗಳನ್ನು ಪ್ರಸ್ತಾಪಿಸಲು ಹಿಂದೇಟು ಹಾಕುತ್ತಾರೆ. ಇಂಡಿಯಾ ಒಕ್ಕೂಟವು ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆಯರು, ಎಲ್ಲ ಜಾತಿಯ ಬಡವರ ಪರವಾದಂತಹ ಚಿಂತನೆಗಳನ್ನು ಹಾಗೂ ಗ್ಯಾರಂಟಿಗಳ ಮೂಲಕ, ದೇಶದ ಜನರ ಜೀವನಮಟ್ಟವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಗುರಿ ಹೊಂದಿದೆ ಎಂದು ತಿಳಿಸಿದರು.ಎಎಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಗುತ್ತೇದಾರ ಮಾತನಾಡಿ, ಕೇಂದ್ರದ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಕೋಮುವಾದಿ, ಬೆಲೆ ಏರಿಕೆ, ಚುನಾವಣಾ ಬಾಂಡ್ ಮೊದಲಾದ ಭ್ರಷ್ಟಾಚಾರಗಳಿಂದ, ತೆರಿಗೆ ಭಾರಗಳಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಅಲ್ಲದೇ ಗುಜರಾತ್‌ನ ಸೂರತ್ ನಲ್ಲಿ ಭೀತಿಯ ವಾತಾವರಣ ಸೃಷ್ಟಿಸಿ ವಿರೋಧ ಪಕ್ಷಗಳ ನಾಮಪತ್ರವನ್ನು ಅಸಿಂಧುಗೊಳಿಸಿ ಮತ್ತು ವಾಪಸಾತಿ ಮಾಡಿ ಅವಿರೋಧವಾಗಿ ಅಕ್ರಮದಿಂದ ಜಯಗಳಿಸಿ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಣಿಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದಲಿತರ ಮೇಲೆ ದೌರ್ಜನ್ಯ, ಹಿಂದುಳಿದ ಬಡವರ ಕುರಿತು ನಿರ್ಲಕ್ಷ್ಯದಿಂದ ದೇಶವನ್ನು ದುರಾಡಳಿತದ ಕಡೆ ನೂಕುತ್ತಿದ್ದಾರೆ. ಹೀಗಾಗಿ ದೇಶದ ಮತದಾರರು ಮೋದಿ ನೇತೃತ್ವದ ಸರ್ಕಾರದಿಂದ ಭ್ರಮನಿರಸನಗೊಂಡಿದ್ದಾರೆ. ಕಾರಣ ಈ ಬಾರಿ ಇಂಡಿಯಾ ಒಕ್ಕೂಟದ ನೇತೃತ್ವಕ್ಕೆ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು.ಕಳೆದ ಸುರಪುರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆಯ್ಕೆ ಪಕ್ಷಕ್ಕೆ ನೀಡಿದ ಸುಮಾರು 1500 ಮತಗಳನ್ನು ಈ ಬಾರಿ ಸುರಪುರ ಉಪಚುನಾವಣೆಯ ಅಭ್ಯರ್ಥಿ ರಾಜಾ ವೇಣುಗೋಪಾಲನಾಯಕ, ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ. ಕುಮಾರ ನಾಯಕ ಇವರಿಗೆ ಮತಗಳನ್ನು ಹಾಕಿ ಬಹುಮತದಿಂದ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲನಾಯಕ, ಮುಖಂಡರಾದ ರಾಜಾ ವಾಸುದೇವ ನಾಯಕ, ಮಲ್ಲಣ್ಣ ಸಾಹುಕಾರ ಮುಧೋಳ. ವೆಂಕೋಬ ಸಾಹುಕಾರ ಮಂಗಳೂರ, ಎಎಪಿ ಮುಖಂಡರಾದ ಶರಣಪ್ಪ ದೊರೆ, ಬಸವರಾಜ ರಾಠೋಡ, ರಾಕೇಶ ಜಾಧವ ಸೇರಿದಂತೆ ಇತರರಿದ್ದರು.