ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಬೈಕ್‌ ರ್‍ಯಾಲಿ ನಡೆಸಿ ಸಂಭ್ರಮಿಸಿದರು.

ಬಿಜೆಪಿ ಕಚೇರಿಯಿಂದ ಹೊರಟ ಬೈಕ್‌ ರ್‍ಯಾಲಿ ಬೋಳರಾಮೇಶ್ವರ ದೇವಸ್ಥಾನ, ಐಜಿ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಎಂ.ಜಿ.ರಸ್ತೆ, ಮಾರ್ಗವಾಗಿ ಸಾಗಿ ಅಂತಿಮವಾಗಿ ಆಜಾದ್‌ ಪಾರ್ಕ್‌ ಬಳಿ ಕೊನೆಗೊಂಡಿತ್ತು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ, ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ವ ಜಯ ಗಳಿಸಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಸುಮಾರು 200ಕ್ಕೂ ಅಧಿಕ ಸ್ಥಾನ ಗಳಿಸಿದೆ. ಬಂಗಾಳದಲ್ಲಿ ನಡೆಯುತ್ತಿರುವ ನರಮೇದಗಳಿಗೆ ಮುಕ್ತಿ ನೀಡುವ ಕೆಲಸವನ್ನು ಪ್ರಧಾನಿ ಮೋದಿ ಹಾಗೂ ಅಮಿತ್‌ ಷಾ ಮಾಡಲಿದ್ದಾರೆ. ಪಾಂಡೀಚರಿ ಹಾಗೂ ಅಸ್ಸಾಂನಲ್ಲಿಯೂ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಬೈಕ್‌ ಜಾತಾ ನಡೆಸುವ ಮೂಲಕ ಸಂಭ್ರಮ ಆಚರಣೆ ಮಾಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ಮೇಲೆ ವಿಶ್ವಾಸವಿಟ್ಟು ಮತ ಚಲಾವಣೆ ಮಾಡಿರುವ ಮೂರು ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಿದರು.


ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಭಾಗದ ಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆ ಮೂಲಕ ಡಿ.ಎನ್‌. ಜೀವ ರಾಜ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶೃಂಗೇರಿ ಜನರಿಗೆ ಕಳೆದ ಮೂರು ವರ್ಷ ಬಿಜೆಪಿ ಶಾಸಕರು ಇದ್ದೂ ಇಲ್ಲದಂತೆ ಆಗಿತ್ತು. ಸತ್ಯಮೇವ ಜಯತೆ ಎಂಬಂತೆ ಜೀವರಾಜ್‌ ಮತ್ತೆ ಶಾಸಕರಾಗಿ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

--

ಫೋಟೋ

ಪಂಚ ರಾಜ್ಯದ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ ಬೈಕ್‌ ರ್‍ಯಾಲಿಗೆ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್‌ ಕೋಟ್ಯಾನ್‌ ಸೇರಿದಂತೆ ಮೊದಲಾದವರಿದ್ದರು.