ಇನ್ನೊಂದು ತಿಂಗಳಲ್ಲಿ ಚುನಾವಣೆ ಘೋಷಣೆ ಸಾಧ್ಯತೆ: ಶೆಟ್ಟರ

| Published : Feb 12 2024, 01:36 AM IST

ಸಾರಾಂಶ

ಬಹಳ ಎಂದರೆ ಇನ್ನು ಹದಿನೈದು ದಿನ ಅಥವಾ ತಿಂಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸುತ್ತೂರು ಮಠದ ಜಾತ್ರೆಗೆ ಬಂದಿದ್ದಾರೆ. ಮೈಸೂರು ಭಾಗದ ಪ್ರಮುಖರ ಜತೆಗೆ ಸಭೆ ನಡೆಸುತ್ತಿದ್ದಾರೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿನ ಪ್ರಮುಖರ ಜತೆಗೆ ಮಾತನಾಡಿದರೆ ಅದು ಚುನಾವಣೆ ರಣಕಹಳೆ ಅಲ್ಲ. ರಣಕಹಳೆ ಎನ್ನುವುದು ಮಾಧ್ಯಮಗಳ ಶಬ್ದ ಎಂದರು.

ಬಹಳ ಎಂದರೆ ಇನ್ನು ಹದಿನೈದು ದಿನ ಅಥವಾ ತಿಂಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣವಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಕೋಟ್ಯಂತರ ಜನರ ಕನಸು ಎಂದರು.

ಕೆಲ ದಿನಗಳ ಹಿಂದೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಇಂದೋರ್‌ಗೆ ಹೋಗಿದ್ದೆ. ಆದರೆ ಸಂಘದ ಯಾವ ಮುಖಂಡರನ್ನೂ ಭೇಟಿ ಮಾಡಿಲ್ಲ. ನಾನು ಯಾವ ಅಜೆಂಡಾ ಇಟ್ಟುಕೊಂಡು ಪಕ್ಷಕ್ಕೆ ಬಂದಿಲ್ಲ. ಹಿರಿಯರು ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದು ಹೇಳಿದರು. ಅದಕ್ಕಾಗಿ ವಾಪಸ್‌ ಪಕ್ಷಕ್ಕೆ ಬಂದಿದ್ದೇನೆ ಎಂದರು.

ನಾನು ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ವ್ಯಕ್ತಿ. ಎಲ್ಲರ ಜತೆಗೆ ನಾನು ಹೊಂದಿಕೊಳ್ಳುತ್ತೇನೆ. ಅವರೇ ಹೊಂದಿಕೊಳ್ಳಲಿಲ್ಲ ಎಂದರೆ ನಾನೇನು ತಾನೇ ಮಾಡಲಿ ಎನ್ನುವ ಮೂಲಕ ಪಕ್ಷದಲ್ಲಿ ಇನ್ನು ಅಸಮಾಧಾನವಿದೆ ಎಂದು ಪರೋಕ್ಷವಾಗಿ ಹೇಳಿದರು.

ಪಾಲಿಕೆ ಸದಸ್ಯೆ ಸರಸ್ವತಿ ದೋಂಗಡಿ ಸದಸ್ಯತ್ವ ರದ್ದಾಗಬಾರದಿತ್ತು. ನಾನು ಅವರ ಜತೆಗೆ ಮಾತನಾಡಿದ್ದೇನೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಮೊನ್ನೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಮಾತನಾಡಿದಾಗ ಕೇಸ್‌ ವಿಥ್‌ಡ್ರಾ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ತಡವಾಗಿದ್ದಕ್ಕೆ ಸದಸ್ಯತ್ವ ರದ್ದಾಗಿದೆ. ಇದೀಗ ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ, ನೋಡೋಣ ಎಂದರು.