ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಪಕ್ಕದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳನ್ನೊಳಗೊಂಡ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯು ದಿನೇ ದಿನೆ ಕಾವುಪಡೆದುಕೊಳ್ಳುತ್ತಿದ್ದು, ಇತ್ತ ಜಿಲ್ಲಾಡಳಿತ ಮತದಾನಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ. ಮತ್ತೊಂದು ಕಡೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಎಲ್ಲೆಡೆ ಸಂಚರಿಸಿ ಪ್ರಚಾರ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ಇಡೀ ಕ್ಷೇತ್ರದಲ್ಲಿ ಚುನಾವಣಾ ವಾತಾವರಣವು ಬಿರುಸುಗೊಂಡಂತಾಗಿದೆ.
ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡನೇ ಹಂತದಲ್ಲಿ (ಮೇ.7) ಮತದಾನ ನಿಗದಿಗೊಂಡ ಹಿನ್ನೆಲೆಯಲ್ಲಿ ಇಷ್ಟು ದಿನ ಟಿಕೆಟ್ ಹಂಚಿಕೆ, ಪಕ್ಷದ ಸಂಘಟನೆ, ಅಸಮಧಾನದಲ್ಲಿ ಕಾಲಕಳೆದ ಮುಖಂಡರು ಇದೀಗ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಕೊನೆ ಹಂತಕ್ಕೆ ಬಂದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಯ ಪೂರ್ವ ತಯಾರಿ ಜೊತೆಗೆ ಕ್ಷೇತ್ರದಲ್ಲಿ ಪ್ರಚಾರ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಇಷ್ಟು ದಿನಗಳ ಕಾಲ ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಪಕ್ಷಗಳ ಕಾರ್ಯಕರ್ತರ, ಮುಖಂಡರ, ಮಠ-ಮಸೀದಿ, ಚರ್ಚೆಗಳಿಗೆ ಭೇಟಿ ನೀಡಿದ ಅಭ್ಯರ್ಥಿಗಳು ಇದೀಗ ಬಹಿರಂಗ ಸಭೆಗಳನ್ನು ನಡೆಸುತ್ತಿದ್ದಾರೆ.
ಎರಡು ದಿನ ಬಾಕಿ :ಕಳೆದ ಏ.12 ರಂದು ಲೋಕಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಂದಿನಿಂದ ಮಂಗಳವಾರದ ತನಕ ಕೇವಲ 5 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ. ಉಮೇದುವಾರಿಕೆ ಸಲ್ಲಿಕೆಗೆ ಇನ್ನು ಎರಡು ದಿನಗಳು ಮಾತ್ರ ಬಾಕಿಯಿದ್ದು ನಾಮಪತ್ರಗಳ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಅವರು ಇದೇ ಏ.18 ರಂದು ನಾಮಪ್ರ ಸಲ್ಲಿಸಲು ತೀರ್ಮಾನಗೊಂಡಿದ್ದಾರೆ. ಅದೇ ದಿನ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಸಹ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರೊಂದಿಗೆ ಸೇರಿ ಮತ್ತೊಮ್ಮೆ ನಾಮಪತ್ರಸಲ್ಲಿಸುವುದಾಗಿ ತಿಳಿಸಿದ್ದಾರೆ.
ಗೊಂದಲ, ಅಸಮಧಾನಗಳು: ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ಅಸಮಧಾನನ್ನು ಬಿ.ವಿ.ನಾಯಕ ಜೀವಂತವಾಗಿರಿಸಿಕೊಂಡಿರುವಂತೆ ಕಾಣುತಿದೆ. ಪಕ್ಷದ ಉಸ್ತುವಾರಿಗಳ ಎದುರೇ ಟಿಕೆಟ್ ವಂಚಿತ ಬಿ.ವಿ.ನಾಯಕ ಅವರು ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ ಬಿ.ಫಾರಂ ನೀಡಿದ್ದರು. ಆದರೆ ಕೊನೆ ಕ್ಷಣದ ವರೆಗೂ ಕಾದುನೋಡುವೆ, ನಾಮಪತ್ರ ಸಲ್ಲಿಸಿವೆ ಎಂದು ಹೇಳಿಕೆಯನ್ನು ಸಹ ನೀಡಿದ್ದರು. ಅದೇ ರೀತಿ ಕಾಂಗ್ರೆಸ್ ಜಿ.ಕುಮಾರ ನಾಯಕ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಮಯದಲ್ಲಿಯೇ ಮುಖಂಡ ಕೆ.ದೇವಣ್ಣ ನಾಯಕ ಅವರು ಕಾಂಗ್ರೆಸ್ ಪಕ್ಷದಿಂದ ನಾಮಪತ್ರವನ್ನು ಸಲ್ಲಿಸಿದ್ದು, ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಸಹ ಕ್ಷೇತ್ರದಲ್ಲಿ, ರಾಜಕೀಯ ಪಕ್ಷಗಳಲ್ಲಿ ಗೊಂದಲ, ಅಸಮಧಾನಗಳ ನಡುವೆ ಚುನಾವಣೆ ವಾತಾವರಣವು ಬಿರುಸುಗೊಂಡಿರುವುದು ಮುಂದಿನ ದಿನಗಳಲ್ಲಿ ಕಣದ ಕಾವು ಮತ್ತಷ್ಟು ಹೆಚ್ಚಾಗಲಿದೆ ಎನ್ನುವ ಸಂದೇಶವನ್ನು ನೀಡಿದೆ.ಸಿಂಧನೂರು-ಮಸ್ಕಿಯಲ್ಲಿ ಚುರುಕು
ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಚಟುವಟಿಕೆಗಳು ಚುರುಕುಪಡೆದುಕೊಂಡಿವೆ. ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಕಣದಲ್ಲಿದ್ದು, ಅವರ ಪರವಾಗಿ ಸ್ಥಳೀಯ ನಾಯಕರು ಉಭಯ ಕ್ಷೇತ್ರಗಳಲ್ಲಿ ಸಂಚರಿಸಿ, ಸಹಕಾರವನ್ನು ಕೋರುತ್ತಿದ್ದಾರೆ.