ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಲೋಕಸಭೆ ಚುನಾವಣೆ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಆದರೆ ಒಂದು ಕಾಲದಲ್ಲಿ ಸಕ್ರಿಯವಾಗಿದ್ದ ಕ್ಷೇತ್ರಕ್ಕೆ ತಾವೇ ತಮ್ಮ ಪಕ್ಷದ ಅಭ್ಯರ್ಥಿಗೆ ಸ್ಟಾರ್ ಪ್ರಚಾರಕರಂತೆ ಮುಂಚೂಣಿಯಲ್ಲಿ ನಿಂತು ತಮ್ಮದೇ ಚುನಾವಣೆ ಏನೋ ಎಂಬಂತೆ ಕ್ಯಾಂಪೇನ್ ನಡೆಸುತ್ತಿದ್ದ ಬಹಳಷ್ಟು ಹಿರಿಯರು ಇದೀಗ ಹಿಂದೆ ಸರಿದಿದ್ದಾರೆ. ಅವರನ್ನು ಪಕ್ಷಗಳು ಕರೆಯುವ ಗೋಜಿಗೆ ಹೋಗುತ್ತಿಲ್ಲ ಎಂಬುದು ಕೂಡ ಅಷ್ಟೇ ಸ್ಪಷ್ಟ.
ಕೆಲವರು ಕೆಲ ಕಾರಣಗಳಿಂದ ಹಿಂದೆ ಸರಿದು ನೇಪಥ್ಯಕ್ಕೆ ಸರಿದರೆ, ಕೆಲವರು ವಯಸ್ಸಿನ ಕಾರಣದಿಂದ ಹಿಂದೆ ಸರಿದಿದ್ದಾರೆ. ಹೀಗೆ ಹಿಂದೆ ಸರಿದವರು ಬರೀ ಒಂದೇ ಪಕ್ಷದಲ್ಲೇನೂ ಇಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿನವರು ಇರುವುದು ವಿಶೇಷ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಹೆಚ್ಚಿನವರಿದ್ದಾರೆ.ಕೇಳಿಸುತ್ತಿಲ್ಲ ಗಟ್ಟಿ ಧ್ವನಿ:
ಕಾಂಗ್ರೆಸ್‌ನ ಮಾಜಿ ಸ್ಪೀಕರ್ ವೀರಣ್ಣ ಮತ್ತಿಗಟ್ಟಿ, ಪಿ.ಸಿ. ಸಿದ್ದನಗೌಡ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಜೆಡಿಎಸ್‌ನಲ್ಲಿರುವ ಕೆ.ಎನ್. ಗಡ್ಡಿ, ಬಿಜೆಪಿ ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ಎಸ್.ಐ. ಚಿಕ್ಕನಗೌಡರ, ಆರ್.ಬಿ. ಶಿರಿಯಣ್ಣವರ, ಮಾಜಿ ಮೇಯರ್ ಪಾಂಡುರಂಗ ಪಾಟೀಲ ಹೀಗೆ ಸಾಲುಸಾಲು ಹಿರಿಯರು ನೈಪಥ್ಯಕ್ಕೆ ಸರಿದಂತಾಗಿದೆ.ವೀರಣ್ಣ ಮತ್ತಿಗಟ್ಟಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಆದರೆ ಕಾಂಗ್ರೆಸ್ ಸಂಘಟನೆಯಲ್ಲಿ ಹೆಸರು ಪಡೆದವರು. ಪ್ರತಿ ಚುನಾವಣೆಯಲ್ಲೂ ಪ್ರಚಾರದಲ್ಲಿ ತೊಡಗುತ್ತಿದ್ದರು. ಆದರೆ ಈ ಸಲ ವಯಸ್ಸಿನ ಕಾರಣಕ್ಕೆ ನಡೆಯಲು ಆಗುತ್ತಿಲ್ಲ. ಹೀಗಾಗಿ ಪ್ರಚಾರದಿಂದ ಹಿಂದೆ ಸರಿದು ಮನೆಯಲ್ಲಿ ಉಳಿದಿದ್ದಾರೆ.
ಪುತ್ರನಿಗೆ ಪಟ್ಟಾಭಿಷೇಕ:ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರಿಗೂ ವಯಸ್ಸಾಗಿದೆ. ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ರಾಜಕಾರಣದಿಂದ ನೈಪಥ್ಯಕ್ಕೆ ಸರಿದಂತಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಚುಕ್ಕಾಣಿ ಹಿಡಿದಿದ್ದಾರೆ. ಇವರ ಪುತ್ರರೂ ಆಗಿರುವ ಶಾಸಕ ಅರವಿಂದ ಬೆಲ್ಲದ ಅಬ್ಬರದ ಪ್ರಚಾರದಲ್ಲಿ ತೊಡಗುವ ಮೂಲಕ ಪ್ರಚಾರದಲ್ಲಿ ಅವರ ಸ್ಥಾನ ತುಂಬಿದ್ದಾರೆ.
ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ, ಒಂದು ಕಾಲದಲ್ಲಿ ತಮ್ಮ ಗೌಡಿಕೆಯಿಂದಲೇ ಪ್ರಚಾರ ನಡೆಸುತ್ತಾ ಫೇಮಸ್ ಆದವರು. ಪ್ರಾರಂಭದಲ್ಲಿ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದ ಸಿದ್ದನಗೌಡರ, ನಂತರ ಕಾಂಗ್ರೆಸ್ ಸೇರಿದರು. ಆದರೆ ಇದೀಗ ಯಾವ ಸಭೆ ಸಮಾರಂಭಗಳಲ್ಲೂ ಭಾಗವಹಿಸುವುದಿಲ್ಲ. ಮನೆ ಸೇರಿ ನಾಲ್ಕಾರು ವರ್ಷವಾದಂತಾಗಿದೆ. ಅವರ ಪ್ರಚಾರದ ಅಬ್ಬರದ ಕೊರತೆಯೂ ಈ ಚುನಾವಣೆಯಲ್ಲಿ ಎದ್ದು ಕಾಣುತ್ತಿದೆ.ಮತ್ತೊಬ್ಬ ಮಾಜಿ ಸಚಿವ ಎಂದರೆ ಕೆ.ಎನ್. ಗಡ್ಡಿ, ಕಳೆದ ವಿಧಾನಸಭೆ ಚುನಾವಣೆವರೆಗೂ ಕಾಂಗ್ರೆಸ್‌ನಲ್ಲಿದ್ದರು. ಆಗ ಟಿಕೆಟ್ ಸಿಗಲಿಲ್ಲ ಎಂದು ಪಕ್ಷದೊಂದಿಗೆ ಮುನಿಸಿಕೊಂಡು ಜೆಡಿಎಸ್ ಸೇರಿದ್ದರು. ನವಲಗುಂದ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದು ಆಯ್ತು. ಆಗಿನಿಂದ ಮತ್ತೆ ಮನೆ ಸೇರಿದವರು ಮತ್ತೆ ಕಾಣಿಸಿಕೊಂಡಿಲ್ಲ. ಹಾಗಂತ ಎಲ್ಲಿಯೂ ಬಂದಿಯೇ ಇಲ್ಲ ಅಂತೇನೂ ಅಲ್ಲ. ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಸಭೆಯೊಂದರಲ್ಲಿ ಒಂದು ಬಾರಿ ಹಾಜರಾಗಿ ಹೋದವರು ಮತ್ತೆ ಪತ್ತೆಯಿಲ್ಲ.
ಹೀಗೆ ನೈಪಥ್ಯಕ್ಕೆ ಸರಿದವರ ಪೈಕಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಕೂಡ ಒಬ್ಬರು. ಇವರು ಸದ್ಯ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರೂ ಹೌದು. ಇವರು ಪೂರ್ಣವಾಗಿ ಮನೆಯೇ ಸೇರಿದ್ದಾರೆ ಅಂತೇನೂ ಇಲ್ಲ. ಆಗಾಗ ಕಾಂಗ್ರೆಸ್ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೂ ಪೂರ್ಣವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿಲ್ಲ ಎಂಬುದು ಮಾತ್ರ ಸ್ಪಷ್ಟ. ಆದರೆ ಮುಂಚೆ ಹಾಗಿರಲಿಲ್ಲ. ತಾವೇ ಮುಂದೆ ನಿಂತು ಚುನಾವಣೆಯನ್ನು ನಿರ್ವಹಿಸುತ್ತಿದ್ದವರ ಪೈಕಿ ಇವರು ಕೂಡ ಒಬ್ಬರಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.ಬಿಎಸ್‌ವೈ ಬೀಗ:
ಇನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿಕರೂ ಆಗಿರುವ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರದ್ದು ಅಬ್ಬರದ ಪ್ರಚಾರ ಇರುತ್ತಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಮುನಿಸಿಕೊಂಡು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆಗ ಸೋಲನ್ನುಭವಿಸಿದ್ದರು. ನಡುವೆ ಕಾಂಗ್ರೆಸ್ ಬಾಗಿಲು ಕೂಡ ತಟ್ಟಿದ್ದರು. ಇನ್ನೇನು ಕಾಂಗ್ರೆಸ್ ಸೇರಿಯೇ ಬಿಟ್ಟರು ಎನ್ನುವಷ್ಟರಲ್ಲೇ ಮತ್ತೆ ತಟಸ್ಥರಾದರು. ಈ ವರೆಗೂ ಬಿಜೆಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಅಂತರ ಕಾಯ್ದುಕೊಂಡು ತಟಸ್ಥರಾಗಿಯೇ ಉಳಿದಿದ್ದಾರೆ. ಪ್ರಚಾರದಲ್ಲಿ ಕಾಣಿಸಿಕೊಳ್ಳದೇ ಮನೆ ಸೇರಿದ್ದಾರೆ.ಅದೇ ರೀತಿ ಬಿಜೆಪಿ ಮುಖಂಡ, ಮಾಜಿ ಶಾಸಕ ಆರ್.ಬಿ. ಶಿರಿಯಣ್ಣವರ 2004ರಲ್ಲಿ ಶಾಸಕರಾಗಿದ್ದರು. 2008ರಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ನವಲಗುಂದ ಕ್ಷೇತ್ರವನ್ನು ಬಿಟ್ಟು ಕೊಟ್ಟ ನಂತರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೂ ಚುನಾವಣೆ ವೇಳೆಯಲ್ಲಿ ಆಗಾಗ ಕಾಣಿಸುತ್ತಿದ್ದ ಶಿರಿಯಣ್ಣವರ, ಈ ಚುನಾವಣೆಯಲ್ಲಂತೂ ಅಕ್ಷರಶಃ ಕಾಣೆಯಾಗಿದ್ದಾರೆ.
ವಿಪ ಮಾಜಿ ಸದಸ್ಯ ಇಸ್ಮಾಯಿಲ್ ಕಾಲೆಬುಡ್ಡೆ, ಈದ್ಗಾ ಮೈದಾನದ ವಿವಾದವನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಕಾಲೆಬುಡ್ಡೆ ಕೂಡ ಒಬ್ಬರು. ಆದರೆ 80ಕ್ಕೂ ಅಧಿಕ ವಯಸ್ಸಾದ ಕಾರಣ ಮನೆ ಬಿಟ್ಟು ಎಲ್ಲೂ ಹೊರಗೆ ಬರುತ್ತಿಲ್ಲ.ಹೊರಗೆ ಬಾರದ ಮುತ್ಸದ್ದಿ:
ಇನ್ನೊಬ್ಬ ಪ್ರಬಲ ನಾಯಕನೆಂದರೆ ಡಾ. ಪಾಂಡುರಂಗ ಪಾಟೀಲ. ಪಾಪಾ ಎಂದು ಹೆಸರು ಪಡೆದಿರುವ ಇವರು ಬಿಜೆಪಿ ಮುಖಂಡರು. ಪಾಲಿಕೆಯಲ್ಲಿ ನಾಲ್ಕು ಬಾರಿ ಸದಸ್ಯರಾಗಿ, ಎರಡು ಬಾರಿ ಮೇಯರ್ ಆಗಿ ಕಾರ್ಯನಿರ್ವಹಿಸಿದವರು. ಜನತಾ ಪರಿವಾರದಿಂದ ರಾಜಕಾರಣಕ್ಕೆ ಬಂದಿದ್ದ ಇವರು ಪಾಲಿಕೆಯಲ್ಲಿ ಅಬ್ಬರಿಸಲು ಶುರು ಮಾಡಿದರೆ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ಅಷ್ಟೊಂದು ವಾಗ್ಮಿ, ಮುತ್ಸದ್ದಿ ರಾಜಕಾರಣಿ. ಆದರೆ ಕಳೆದ ಪಾಲಿಕೆ ಚುನಾವಣೆಯಲ್ಲಿ ಸೋತ ನಂತರ ಮನೆ ಸೇರಿದವರು ಈ ವರೆಗೂ ಹೊರಬಂದಿಲ್ಲ.ಹೀಗೆ ಹಿರಿಯರೆಲ್ಲರೂ ಒಂದಿಲ್ಲ ಒಂದು ಕಾರಣದಿಂದ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದು, ಇವರನ್ನು ಕರೆದುಕೊಂಡು ಬರುವ ಗೋಜಿಗೆ ಈಗಿನ ಮುಖಂಡರು ಮಾಡುತ್ತಿಲ್ಲ. ಇವರು ಇದ್ದರು ಎಂಬುದನ್ನು ಈಗಿನ ಮುಖಂಡರು ಮರೆತಂತಾಗಿದೆ ಎಂಬುದಕ್ಕೆ ಸಾಕ್ಷಿಯಾದಂತಾಗಿದೆ ಎಂಬುದು ಮಾತ್ರ ಸ್ಪಷ್ಟ.