ಸಾರಾಂಶ
ಭದ್ರಾವತಿಯಲ್ಲಿ ಮಂಗಳವಾರ ಗೃಹ ರಕ್ಷಕ ದಳ, ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಎನ್.ಸಿ.ಸಿ., ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ನಡೆಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾವತಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಗೃಹ ರಕ್ಷಕ ದಳ, ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಎನ್.ಸಿ.ಸಿ., ಎನ್.ಎಸ್.ಎಸ್. ವಿದ್ಯಾರ್ಥಿ ಗಳು ಸೇರಿ ವಿಎಸ್‍ಎಲ್ ಗೇಟ್ ನಿಂದ ಪೆರೇಡ್‌ನಲ್ಲಿ ಸಾಗಿ, ಕನಕ ಮಂಟಪದಲ್ಲಿ ‘ಸ್ವೀಪ್ ಶಿವಮೊಗ್ಗ ಮೇ 7’ ಆಕಾರದಲ್ಲಿ ಚಿತ್ತಾರ ಮೂಡಿಸಿ, ಅತ್ಯಾಕರ್ಷಕವಾಗಿ ಮೊಬೈಲ್ ಟಾರ್ಚ್ ಗಳನ್ನು ಆಕಾಶಕ್ಕೆ ತೋರಿಸುತ್ತಾ ಸ್ವೀಪ್ ಆಕೃತಿ ಮೂಡಿಸಿ ಎಲ್ಲರ ಗಮನ ಸೆಳೆಯುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.ಈ ವೇಳೆ ಜಿ.ಪಂ. ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಚುನಾವಣೆ ದೊಡ್ಡ ಪರ್ವ. ಮತದಾನ ನಮ್ಮೆಲ್ಲರ ಹಕ್ಕು. ಭದ್ರಾವತಿಯಲ್ಲಿ ಈ ಬಾರಿ ಮತದಾನದ ಪ್ರಮಾಣ ಹೆಚ್ಚಬೇಕು. ತಾವು ಮತದಾನ ಮಾಡಿ ಅಕ್ಕಪಕ್ಕದವರೂ ಮತದಾನ ಮಾಡುವಂತೆ ಪ್ರೇರೇಪಿಸಬೇಕೆಂದು ಅವರು ಶೇ.100 ರಷ್ಟು ಮತದಾನ ಮಾಡುವಂತೆ ಮನವಿ ಮಾಡಿದರು.
ಶಿವಮೊಗ್ಗ ಎಸಿ ಸತ್ಯನಾರಾಯಣ ಮಾತನಾಡಿ, ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಗುರಿಯಾಗದೆ, ನಿರ್ಭೀತವಾಗಿ ಮತದಾನ ಮಾಡುವ ಮೂಲಕ ಸುಭದ್ರ ಪ್ರಜಾಪ್ರಭುತ್ವ ರೂಪಿಸಲು ಅನುವು ಮಾಡಿಕೊಡಬೇಕು ಎಂದರು.ಜಿ.ಪಂ. ಸಿಪಿಒ ಗಾಯತ್ರಿ ಮಾತನಾಡಿ, ಮತದಾನ ನಮ್ಮೆಲ್ಲರ ಸಮಾನ ಹಕ್ಕು. ಯಾರೂ ಕೂಡ ಮತದಾನ ಮಾಡಲು ಮರಿಯಬೇಡಿ ಎಂದರು.
ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೀಜ್ ಮತದಾನದ ಕುರಿತು ಅರಿವು ಮೂಡಿಸಿ, ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.ಪೆರೇಡ್ ಕಾರ್ಯಕ್ರಮದಲ್ಲಿ ಗೃಹ ರಕ್ಷಕ ದಳದವರು ನಗರದ ಮುಖ್ಯ ರಸ್ತೆಗಳು ಮತ್ತು ವೃತ್ತಗಳಲ್ಲಿ ಪಿರಮಿಡ್ ರಚನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಮಾನವ ಸರಪಳಿ ಸೇರಿದಂತೆ ಚುನಾವಣೆ ಗೀತೆ ಗಾಯನ ಮಾಡಲಾಯಿತು.
ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ಚೇತನ್, ಭದ್ರಾವತಿ ಇಒ ಗಂಗಣ್ಣ, ನಗರಸಭೆ ಆಯುಕ್ತರಾದ ಚನ್ನಪ್ಪ, ಸುಹಾಸಿನಿ, ಬಿಇಓ, ಇತರೆ ಇಲಾಖೆ ಅಧಿಕಾರಿಗಳು, ಸ್ವೀಪ್ ತಂಡದವರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.