ಮುಕ್ತ, ಶಾಂತಿಯುತ ಮತದಾನಕ್ಕೆ ವೇದಿಕೆ ಸಿದ್ಧಗೊಳಿಸಿ

| Published : Apr 19 2024, 01:02 AM IST

ಸಾರಾಂಶ

ಮನೆಯಿಂದ ಮತದಾನ ಮಾಡುತ್ತಿರುವ ಹಿರಿಯ ನಾಗರಿಕರಿಂದ, ವಿಕಲಚೇತನರಿಂದ ಮತದಾನ ಪಡೆಯಲು ತೆರಳುವ ತಂಡಗಳಿಗೆ ಸರಿಯಾದ ತರಬೇತಿ ನೀಡಬೇಕು.

ಧಾರವಾಡ:

ಧಾರವಾಡದ ಕ್ಷೇತ್ರದ ಚುನಾವಣೆಗೆ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಆಗಮಿಸಿರುವ ಅಜಯ ಗುಪ್ತಾ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿದರು.

ಮನೆಯಿಂದ ಮತದಾನ ಮಾಡುತ್ತಿರುವ ಹಿರಿಯ ನಾಗರಿಕರಿಂದ, ವಿಕಲಚೇತನರಿಂದ ಮತದಾನ ಪಡೆಯಲು ತೆರಳುವ ತಂಡಗಳಿಗೆ ಸರಿಯಾದ ತರಬೇತಿ ನೀಡಬೇಕು. ಜಿಲ್ಲೆಯ ಮತದಾರ ಮುಕ್ತ ಮತದಾನ ಮಾಡಲು ಶಾಂತಿಯುತ, ಸುವ್ಯವಸ್ಥಿತ ವಾತಾವರಣ ರೂಪಿಸಬೇಕು. ತಾವು ಸಹ ಮತದಾನ ಕೇಂದ್ರಗಳಿಗೆ, ಚೆಕ್‌ಪೋಸ್ಟ್ ಮತ್ತು ಕಂಟ್ರೋಲ್ ರೂಂಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.

ಸುವಿಧಾ ಮತ್ತು ಸಿ-ವಿಜಲ್ ಆ್ಯಪ್ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ಸಾರ್ವಜನಿಕರಲ್ಲಿ ಸುವಿಧಾ ಮತ್ತು ಸಿ-ವಿಜಿಲ್ ಬಳಕೆ ಬಗ್ಗೆ ಅರಿವು ಮೂಡಿಸಲು ಅವರು ತಿಳಿಸಿದರು.

ಚುನಾವಣಾಧಿಕಾರಿ ದಿವ್ಯ ಪ್ರಭು ಮಾತನಾಡಿ, ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನಿಗಾವಹಿಸಲು ಜಿಲ್ಲಾಮಟ್ಟದಲ್ಲಿ ಹಾಗೂ ವಿಧಾನಸಭಾ ಮತಕ್ಷೇತ್ರವಾರು ಎಂಸಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಮಾ. 16ರಿಂದ ಈವರೆಗೆ ವಿವಿಧ ಚೆಕ್‌ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣಾ ಸಮಯದಲ್ಲಿ ದಾಖಲೆರಹಿತ ಮತ್ತು ಚುನಾವಣಾ ಅಕ್ರಮಗಳಿಗೆ ಬಳಸಬಹುದಾದ ಸಂಶಯದ ಆಧಾರದಲ್ಲಿ ಪತ್ತೆಯಾದ ₹ 2.28 ನಗದು, ₹ 30.90 ಲಕ್ಷ ಮೌಲ್ಯದ 10 ಸಾವಿರ ಲೀಟರ್ ಮದ್ಯ, ₹ 9.26 ಲಕ್ಷ ಮೊತ್ತದ ಡ್ರಗ್ಸ್, ₹ 38.50 ಲಕ್ಷ ಮೊತ್ತದ ಬಂಗಾರದ ಆಭರಣ ಮತ್ತು ₹ 30.07 ಲಕ್ಷ ಮೌಲ್ಯಗಳ ಕುಕ್ಕರ್, ಸೀರೆ, ಪ್ಯಾಂಟ್ ಪೀಸ್ ಸೇರಿದಂತೆ ವಿವಿಧ ರೀತಿಯ ಉಚಿತ ಕೊಡುಗೆಗಳ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

1757 ದೂರು ಸ್ವೀಕಾರ, ಎಫ್‌ಎಸ್‌ ತಂಡದಿಂದ ಒಂದು, ಎಸ್‌ಎಸ್‌ ತಂಡದಿಂದ 11 ಪ್ರಕರಣ ಹಾಗೂ ಅಬಕಾರಿ ಕಾನೂನು ಉಲ್ಲಂಘನೆಯಡಿ 67 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಅಂಚೆ ಮತದಾನ:

ಜಿಲ್ಲೆಯಲ್ಲಿ ಮನೆಯಿಂದ ಮತದಾನ ಮಾಡಲು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 1,405 ಹಾಗೂ 496 ವಿಕಲಚೇತನರು ನೋಂದಾಯಿಸಿಕೊಂಡಿದ್ದಾರೆ. ಮತ್ತು ಜಿಲ್ಲೆಯಲ್ಲಿ ಅಗತ್ಯ ಸೇವೆಯಲ್ಲಿರುವ 1,188 ಜನ ಸೇವಾ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಒಂದು ಸ್ಥಳದಲ್ಲಿ ಅಂಚೆ ಮತದಾನ ಕೇಂದ್ರ ತೆರೆದು, ಮೂರು ದಿನ ಅವಕಾಶ ಕಲ್ಪಿಸಲಾಗುವುದು ಎಂದರು.

ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ಮುಕ್ತ ಚುನಾವಣೆ ಜರುಗಿಸಲು ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಯೊಂದಿಗೆ ಅರೆ ಸೇನಾ ಪಡೆ, ಮೀಸಲು ಪಡೆ, ಹೊಂ ಗಾರ್ಡ್‌ಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಹಲವು ಅಪರಾಧ ಪ್ರಕರಣಗಳಲ್ಲಿ ಬಾಗಿಯಾಗಿರುವ 21 ಆರೋಪಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಿಂದ ಗಡೀಪಾರು ಮಾಡಲಾಗಿದೆ ಎಂದರು.

ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಜಿಪಂ ಸಿಇಒ ಸ್ವೂರಪ ಟಿ.ಕೆ. ಮಾತನಾಡಿದರು.