ಮೇಲ್ಸೇತುವೆ ನಿರ್ಮಿಸದಿದ್ದರೆ ಚುನಾವಣೆ ಬಹಿಷ್ಕಾರ: ಗಜಾನನ ನಾಯ್ಕ

| Published : Mar 29 2024, 12:51 AM IST

ಮೇಲ್ಸೇತುವೆ ನಿರ್ಮಿಸದಿದ್ದರೆ ಚುನಾವಣೆ ಬಹಿಷ್ಕಾರ: ಗಜಾನನ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ರೈಲ್ವೆ ಸಾಗುವರೆಗೂ ಕೋಟ ರೈಲ್ವೆ ಗೇಟ್ ಬಳಿ ಸುಮಾರು ಅರ್ಧ ತಾಸಿಗೂ ಹೆಚ್ಚಿನ ಸಮಯ ಕಾಯಬೇಕಾದ ಪರಿಸ್ಥಿತಿ ಇದೆ.

ಕಾರವಾರ: ಹೊನ್ನಾವರ ತಾಲೂಕಿನ ಮಂಕಿ ಅನಂತವಾಡಿ ಗ್ರಾಪಂ ವ್ಯಾಪ್ತಿಯ ಕೊಂಕಣ ರೈಲ್ವೆ ಗೇಟ್‌ನಿಂದ ಸ್ಥಳೀಯರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರ ಅನುಕೂಲಕ್ಕಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಲ ಕ್ರಮ ಕೈಗೊಳ್ಳದೆ ಇದ್ದರೆ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.

ಮೇಲ್ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷ ಗಜಾನನ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಕಿ ಅನಂತವಾಡಿ ವ್ಯಾಪ್ತಿಗೆ ಕೋಟ, ತುಂಬೆಬೀಳು, ಗಂಜಿಗೇರಿ, ಮುಂಡಾಳು, ಗಮ್ಮಿನಮುಲೆ ಗ್ರಾಮಗಳಿವೆ. ಈ ಗ್ರಾಮದವರಿಗೆ ರೈಲ್ವೆ ಹಾದು ಹೋಗುವ ರಸ್ತೆ ಒಂದೇ ಇದೆ. ಆದರೆ ಸಾಕಷ್ಟು ಹೊತ್ತು ರೈಲ್ವೆ ಗೇಟ್ ಹಾಕಿಡುವುದರಿಂದ ಈ ಗ್ರಾಮದವರಿಗೆ ತೊಂದರೆ ಆಗುತ್ತಿದೆ. ತುರ್ತು ಪರಿಸ್ಥಿತಿಯಲ್ಲೂ ಗೇಟ್ ತೆರೆಯುವುದಿಲ್ಲ. ಇದರಿಂದ ಶಾಲೆಗೆ ತೆರಳುವವರಿಗೆ, ಅನಾರೋಗ್ಯ ಪೀಡಿತರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಸಾಕಷ್ಟು ವರ್ಷಗಳಿಂದ ಬೇಡಿಕೆ ರೈಲ್ವೆ ಇಲಾಖೆ ಮುಂದಿಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಸದ ಅನಂತಕುಮಾರ್ ಸೇರಿದಂತೆ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ. ಇವರಿಗೆ ಜನರ ಸಮಸ್ಯೆ ಸ್ಪಂದಿಸುವ ಕಾರ್ಯ ಆಗಿಲ್ಲ ಎಂದು ಗಜಾನನ ಆರೋಪಿಸಿದರು.

ಸಾರ್ವಜನಿಕರು ರೈಲ್ವೆ ಸಾಗುವರೆಗೂ ಕೋಟ ರೈಲ್ವೆ ಗೇಟ್ ಬಳಿ ಸುಮಾರು ಅರ್ಧ ತಾಸಿಗೂ ಹೆಚ್ಚಿನ ಸಮಯ ಕಾಯಬೇಕಾದ ಪರಿಸ್ಥಿತಿ ಇದೆ. ಪರ್ಯಾಯ ರಸ್ತೆ ಮಾರ್ಗ ಇಲ್ಲದ ಕಾರಣ ಅನಂತವಾಡಿ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಜನರು ಪಟ್ಟಣ ಬರಲು ಹೆಚ್ಚಿನ ಸಮಯ ರೈಲ್ವೆ ಗೇಟ್ ಬಳಿ ಕಳೆಯಬೇಕಾಗಿದೆ. ಪಟ್ಟಣ ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳು, ಶಾಲಾ- ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳಿಗೆ ತೆರಳಲು ರೈಲ್ವೆ ಗೇಟ್ ಅಡ್ಡಿಯಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ರೋಗಿಗಳಿಗೆ ಕಿರಿಕಿರಿಯಾಗುತ್ತಿದೆ ಎಂದರು.

ಈ ವ್ಯಾಪ್ತಿಯಲ್ಲಿ ಸುಮಾರು 250 ಮನೆಗಳಲ್ಲಿ 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಜನರ ಸಂಚಾರಕ್ಕೆ ರೈಲ್ವೆ ಗೇಟ್ ಅಡ್ಡಿ ಆಗುವುದರಿಂದ ಈಗಾಗಲೇ ಗೇಟ್ ಬಳಿ ಕಾದು ಕಾದು ಇಬ್ಬರು ರೋಗಿಗಳು ಮೃತಪಟ್ಟ ಉದಾಹರಣೆ ಇಲ್ಲಿದೆ. ಗೇಟ್ ಸಮಸ್ಯೆಯಿಂದ ಜಾನುವಾರುಗಳು ಸೇರಿದಂತೆ ಇತರೆ ಪ್ರಾಣಿಗಳು ಮೃತಪಟ್ಟಿವೆ. ಇದರಿಂದ ಈ ಗೇಟ್ ಆಚೆಗೆ ಇರುವ ಗ್ರಾಮಗಳಿಗೆ ತೆರಳಲು ಬಾಡಿಗೆ ವಾಹನಗಳು ಹಿಂಜರಿಯುತ್ತಿವೆ. ಇದುವರೆಗೂ ಕೊಂಕಣ ರೈಲ್ವೆ ಗೇಟಿನ ಬಳಿ ಮೇಲ್ಸೇತುವೆ ನಿರ್ಮಾಣ ಮಾಡದ ಕಾರಣ ಗ್ರಾಮಸ್ಥರು ಈ ಬಾರಿ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಹಾಗೂ ರೈಲು ತಡೆದು ಬೃಹತ್ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಒತ್ತಾಯ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಉಪಾಧ್ಯಕ್ಷ ಪಾಂಡು ನಾಯ್ಕ, ಮಹಾದೇವ ನಾಯ್ಕ ಶಶಿಕಲಾ ನಾಯ್ಕ, ನಾಗಮ್ಮ ನಾಯ್ಕ, ಪರಮೇಶ್ವರ್, ಈಶ್ವರ ನಾಯ್ಕ, ರಾಜು ನಾಯ್ಕ, ಪ್ರಶಾಂತ ನಾಯ್ಕ, ಜಯಂತ ನಾಯ್ಕ, ಪ್ರಶಾಂತ ನಾಯ್ಕ ಹಾಗೂ ಇತರರು ಇದ್ದರು.