ಸೌಲಭ್ಯ ಕಲ್ಪಿಸದಿದ್ದರೆ ಚುನಾವಣಾ ಬಹಿಷ್ಕಾರ: ವಿವೇಕಾನಂದ ನಗರ ನಿವಾಸಿಗಳು

| Published : Apr 07 2024, 01:51 AM IST

ಸೌಲಭ್ಯ ಕಲ್ಪಿಸದಿದ್ದರೆ ಚುನಾವಣಾ ಬಹಿಷ್ಕಾರ: ವಿವೇಕಾನಂದ ನಗರ ನಿವಾಸಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ನೀರಿನ ಸಂಪರ್ಕವನ್ನು ಇದುವರೆಗೂ ಕಲ್ಪಿಸಿಕೊಟ್ಟಿಲ್ಲ. ಬೋರ್‌ವೆಲ್ ನೀರಿನಲ್ಲಿ ಲವಣಾಂಶ ಹೆಚ್ಚಿರುವುದರಿಂದ ಕುಡಿಯುವುದಕ್ಕೆ, ಅಡುಗೆ ಮಾಡುವುದಕ್ಕೂ ಉಪಯೋಗಿಸಲಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿಲ್ಲ. ಶುದ್ಧ ಕುಡಿಯುವ ನೀರನ್ನು ತರುವುದಕ್ಕೆ ಎರಡು-ಮೂರು ಕಿಮೀ ಹೋಗಬೇಕು. ಅದಕ್ಕೆ ಗಂಡಸರನ್ನೇ ಕಾಯುವಂತಹ ಪರಿಸ್ಥಿತಿ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಇಲ್ಲಿನ ವಿವೇಕಾನಂದನಗರ ಬಡಾವಣೆಗೆ ರಸ್ತೆ, ಚರಂಡಿ, ಒಳಚರಂಡಿ, ಬೀದಿದೀಪ, ಕುಡಿಯುವ ನೀರು ಸೇರಿ ಇನ್ನಿತರ ಸೌಲಭ್ಯಗಳನ್ನು ಒದಗಿಸದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ವಿವೇಕಾನಂದನಗರ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ.ರಾಜು ಎಚ್ಚರಿಕೆ ನೀಡಿದರು.

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲೇ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಚುನಾವಣೆ ಬಹಿಷ್ಕರಿಸಿದ್ದ ವೇಳೆ ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ಎಚ್.ಗೋಪಾಲಕೃಷ್ಣೇಗೌಡ ಅವರು ಸ್ಥಳಕ್ಕೆ ಆಗಮಿಸಿ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಅಭಯ ನೀಡಿದ್ದರು. ಚುನಾವಣೆ ಮುಗಿದ ಬಳಿಕ ಅವರೂ ವರ್ಗಾವಣೆಯಾದರು. ವಿವೇಕಾನಂದನಗರಕ್ಕೆ ಸೌಲಭ್ಯ ಕಲ್ಪಿಸುವುದು ಮರೀಚಿಕೆಯಾಗಿಯೇ ಉಳಿಯಿತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಳಲು ವ್ಯಕ್ತಪಡಿಸಿದರು.

ಬಡಾವಣೆಯಲ್ಲಿ ಸಮರ್ಪಕ ರಸ್ತೆ, ಚರಂಡಿ, ಒಳಚರಂಡಿ, ಬೀದಿದೀಪ, ಕುಡಿಯುವ ನೀರಿನ ವ್ಯವಸ್ಥೆಗಳಿಲ್ಲ. ರಾತ್ರಿಯಾಗುತ್ತಲೇ ಬೀದಿನಾಯಿಗಳ ಹಾವಳಿ. ಮಹಿಳೆಯರು ನಿರ್ಭಯವಾಗಿ ಓಡಾಡಲಾಗುತ್ತಿಲ್ಲ. ಬಡಾವಣೆಗೆ ಆಟೋಗಳೇ ಬರುವುದಿಲ್ಲ. ಕಳೆದ ೨೨ ವರ್ಷಗಳಿಂದ ಕಾಡುಜನರ ರೀತಿ ಬದುಕು ಸಾಗಿಸುತ್ತಿದ್ದೇವೆ ಎಂದು ಬೇಸರದಿಂದ ನುಡಿದರು.

ಕಾವೇರಿ ನೀರಿನ ಸಂಪರ್ಕವನ್ನು ಇದುವರೆಗೂ ಕಲ್ಪಿಸಿಕೊಟ್ಟಿಲ್ಲ. ಬೋರ್‌ವೆಲ್ ನೀರಿನಲ್ಲಿ ಲವಣಾಂಶ ಹೆಚ್ಚಿರುವುದರಿಂದ ಕುಡಿಯುವುದಕ್ಕೆ, ಅಡುಗೆ ಮಾಡುವುದಕ್ಕೂ ಉಪಯೋಗಿಸಲಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿಲ್ಲ. ಶುದ್ಧ ಕುಡಿಯುವ ನೀರನ್ನು ತರುವುದಕ್ಕೆ ಎರಡು-ಮೂರು ಕಿಮೀ ಹೋಗಬೇಕು. ಅದಕ್ಕೆ ಗಂಡಸರನ್ನೇ ಕಾಯುವಂತಹ ಪರಿಸ್ಥಿತಿ ಇದೆ ಎಂದು ಹೇಳಿದರು.

ಬಡಾವಣೆಯಲ್ಲಿ ಪೊಲೀಸ್ ಠಾಣೆ ತೆರೆದಿದೆಯಾದರೂ ಅತಿಯಾದ ವೇಗದಲ್ಲಿ ಬರುವ ಯುವಕರು ವ್ಹೀಲಿಂಗ್ ಮಾಡುತ್ತಾರೆ. ಆ ರಸ್ತೆಯಲ್ಲಿ ಓಡಾಡುವುದಕ್ಕೆ ಭಯವಾಗುತ್ತದೆ. ಆದರೆ, ಅವರನ್ನು ನಿಯಂತ್ರಿಸುವವರೇ ಇಲ್ಲದಂತಾಗಿದೆ ಎಂದು ಪೊಲೀಸರ ವಿರುದ್ಧ ಆರೋಪಿಸಿದರು.

ವಿವೇಕಾನಂದ ನಗರಕ್ಕೆ ಸೌಲಭ್ಯ ಕಲ್ಪಿಸುವವರೆಗೆ ಚುನಾವಣೆಯನ್ನು ಬಹಿಷ್ಕರಿಸುವುದಕ್ಕೆ ನಿರ್ಧರಿಸಲಾಗಿದೆ. ಈಗ ಯಾರೇ ಬಂದು ಮನವಿ ಮಾಡಿದರೂ ಅದಕ್ಕೆ ಒಪ್ಪದಿರಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಪದ್ಮಶೇಖರ್, ರಾಮಪ್ಪ, ಎಂ.ವಿ.ರಾಜು, ಸುಮತಿ, ಶಿವರಾಮು, ಶಿವಕುಮಾರ್, ಎಂ.ಪುಟ್ಟೇಗೌಡ ಇತರರಿದ್ದರು.

ಅವ್ಯವಸ್ಥೆಯೇ ಎಲ್ಲ, ಪರಿಹಾರವೇ ಇಲ್ಲ:

ವಿವೇಕಾನಂದ ನಗರ ಜನರು ನೀರಿಗೆ ಎದುರಿಸುತ್ತಿರುವ ಸಂಕಷ್ಟವನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನೀರಿನ ಸಮಸ್ಯೆ ಪರಿಹರಿಸಿಕೊಡುವ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಬಂದು ನೋಡಿಕೊಂಡು ಹೋಗಿದ್ದಾರೆಯೇ ವಿನಃ ಕೆಲಸ ಮಾತ್ರ ಆರಂಭವಾಗಿಲ್ಲ ಎಂದು ದೂರಿದರಲ್ಲದೆ, ಒಳಚರಂಡಿ ನಿರ್ಮಾಣಕ್ಕೆ ೧೬ ಕೋಟಿ ರು. ಮಂಜೂರಾಗಿದ್ದು, ಅದರಲ್ಲಿ ೮ ಕೋಟಿ ರು.ವೆಚ್ಚದ ಕಾಮಗಾರಿ ನಡೆಸಿ ಅರ್ಧಕ್ಕೆ ಕೈಬಿಟ್ಟಿದ್ದಾರೆ. ಉಳಿದ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆರೇಳು ಅಡಿ ಆಳದ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದಾರೆ. ಸತ್ತ ನಾಯಿಗಳು, ಹಸುಗಳ ಶವಗಳನ್ನೆಲ್ಲಾ ತಂದು ವಿವೇಕಾನಂದ ನಗರ ಕುರುಚಲು ಗಿಡಗಳ ನಡುವೆ ಎಸೆದುಹೋಗುತ್ತಿದ್ದಾರೆ. ಅದರಿಂದ ಬರುವ ದುರ್ವಾಸನೆ ಸಹಿಸಲಾಗುತ್ತಿಲ್ಲ. ಮನೆಗಳನ್ನು ಕಟ್ಟುವುದಕ್ಕೆ ಲೈಸೆನ್ಸ್ ಕೊಡುತ್ತಿಲ್ಲ ಎಂದು ಸಮಸ್ಯೆಗಳ ಸರಮಾಲೆಯನ್ನೇ ವಿವರಿಸಿದರು.