ಚುನಾವಣಾ ಕರ್ತವ್ಯ ನಿರ್ವಹಿಸುವ ಗಡಿ ಭಾಗದ ಸರ್ಕಾರಿ ನೌಕರರು ಅಂಚೆ ಮತದಾನ ವಂಚಿತ

| Published : Apr 19 2024, 01:08 AM IST

ಚುನಾವಣಾ ಕರ್ತವ್ಯ ನಿರ್ವಹಿಸುವ ಗಡಿ ಭಾಗದ ಸರ್ಕಾರಿ ನೌಕರರು ಅಂಚೆ ಮತದಾನ ವಂಚಿತ
Share this Article
  • FB
  • TW
  • Linkdin
  • Email

ಸಾರಾಂಶ

ಅಂಚೆ ಮತಪತ್ರ ತೆಗೆದುಕೊಂಡು ಹೋಗಿ ಮನೆಯಲ್ಲಿ ಮತದಾನ ಮಾಡಿ ವಾಪಸ್‌ ನೀಡುತ್ತಿದ್ದರು. ಇದರಲ್ಲಿ ಮತದಾನದ ಗೌಪ್ಯತೆಗೆ ಅವಕಾಶ ಇರುವುದಿಲ್ಲ ಎಂದು ಈ ಸಲದಿಂದ ಅಂಚೆ ಮತದಾನದ ವ್ಯವಸ್ಥೆಯನ್ನೇ ಬದಲಾವಣೆ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಮಂಗಳೂರು

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಗಡಿ ಭಾಗದ ಸರ್ಕಾರಿ ನೌಕರರು ಕೊನೆಗೂ ಅಂಚೆ ಮತದಾನದಿಂದ ವಂಚಿತಗೊಂಡಿದ್ದಾರೆ. ಅಂಚೆ ಮತದಾನ ಕೋರಿಕೆಗೆ ಗುರುವಾರ ಕೊನೆದಿನವಾಗಿದ್ದು, ಲಭ್ಯ ಮಾಹಿತಿ ಪ್ರಕಾರ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳ ಯಾರೊಬ್ಬರಿಗೂ ಮತದಾನಕ್ಕೆ ಅವಕಾಶ ಲಭಿಸಿಲ್ಲ.

ಇದುವರೆಗೆ ಅಂಚೆ ಮತದಾನಕ್ಕೆ ಅಂಚೆ ಮೂಲಕವೇ ಮತಪತ್ರ ತರಿಸಿ ಮತದಾನ ಮಾಡಿ ಕಳುಹಿಸಲಾಗುತ್ತಿತ್ತು. ಅಂಚೆ ಮತಪತ್ರ ತೆಗೆದುಕೊಂಡು ಹೋಗಿ ಮನೆಯಲ್ಲಿ ಮತದಾನ ಮಾಡಿ ವಾಪಸ್‌ ನೀಡುತ್ತಿದ್ದರು. ಇದರಲ್ಲಿ ಮತದಾನದ ಗೌಪ್ಯತೆಗೆ ಅವಕಾಶ ಇರುವುದಿಲ್ಲ ಎಂದು ಈ ಸಲದಿಂದ ಅಂಚೆ ಮತದಾನದ ವ್ಯವಸ್ಥೆಯನ್ನೇ ಬದಲಾವಣೆ ಮಾಡಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ನೌಕಕರು ಅಂಚೆ ಮತದಾನಕ್ಕೆ ಅರ್ಜಿ(ಫಾರಂ ನಂ.12) ಸಲ್ಲಿಸಬೇಕು. ಕರ್ತವ್ಯ ನಿರ್ವಹಿಸುವ ಜಿಲ್ಲೆಯವರಾದರೆ ಅವರು ಚುನಾವಣಾ ಕರ್ತವ್ಯದ ಸರ್ಟಿಫಿಕೆಟ್‌ ಹಾಜರುಪಡಿಸಿ ಯಾವುದೇ ಮತದಾನ ಕೇಂದ್ರದಲ್ಲಿ ಚುನಾವಣಾ ದಿನ ಮತದಾನ ಮಾಡಬಹುದು. ಆದರೆ ಹೊರ ಜಿಲ್ಲೆಯವರು ಅಂಚೆ ಮತಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಅದನ್ನು ಆನ್‌ಲೈನ್‌ ಮೂಲಕ ಅವರವರ ಜಿಲ್ಲೆಗಳಿಗೆ ಅಡ್ಡಪರಿಶೀಲನೆಗೆ ಕಳುಹಿಸಲಾಗುತ್ತದೆ. ಆಗ ಕೇರಳ ರಾಜ್ಯದವರಾದರೆ, ಆನ್‌ಲೈನ್‌ನಲ್ಲಿ ಕಳುಹಿಸಲು ಅವಕಾಶ ನೀಡಲಾಗಿಲ್ಲ. ಇದರಿಂದಾಗಿ ನೆರೆಯ ಕೇರಳ ನಿವಾಸಿಗಳಾಗಿದ್ದು, ಇಲ್ಲಿ ಚುನಾವಣಾ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ಅಂಚೆಮತದಾನಕ್ಕೆ ತೊಡಕಾಗಿದೆ.

ಗಡಿಭಾಗದ ಈ ಸರ್ಕಾರಿ ನೌಕರರಿಗೆ ಅವರದೇ ಜಿಲ್ಲೆಗೆ ತೆರಳಿ ಅಲ್ಲಿನ ಜಿಲ್ಲಾಧಿಕಾರಿಗೆ ಅಂಚೆ ಮತಪತ್ರ ಬಗ್ಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇಲ್ಲಿ ಚುನಾವಣಾ ಕರ್ತವ್ಯ ನಿಭಾಯಿಸಬೇಕಿರುವುದರಿಂದ ತ್ವರಿತವಾಗಿ ಈ ಪ್ರಕ್ರಿಯೆ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ಕೇರಳ ನಿವಾಸಿಗಳಾದ ಸುಮಾರು 173ಕ್ಕೂ ಅಧಿಕ ಮಂದಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತದಾನದಿಂದ ವಂಚಿತಗೊಳ್ಳುವಂತಾಗಿದೆ. ದ.ಕ. ನಿವಾಸಿಯಾಗಿದ್ದು, ಕೇರಳದಲ್ಲಿ ಸರ್ಕಾರಿ ನೌಕರರಾಗಿ ಚುನಾವಣಾ ಕರ್ತವ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೂ ಇದೇ ಸಮಸ್ಯೆ ಎದುರಾಗಿದೆ. ಗಡಿ ಪ್ರದೇಶದ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯ ನಿರ್ವಹಿಸುವವರಿಗೆ ಈ ತೊಂದರೆ ಆಗಿದೆ. ಆದರೆ ಅವರ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲು ಕೋರುವಂತೆ ತರಬೇತು ವೇಳೆ ತಿಳಿಸಲಾಗಿತ್ತು. ಈ ಸಮಸ್ಯೆ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ.

ಮುಲ್ಲೈ ಮುಗಿಲನ್‌, ಜಿಲ್ಲಾ ಚುನಾವಣಾ ಅಧಿಕಾರಿ, ದ.ಕ.