ಅರೇಹಳ್ಳಿ ಕಾಫಿ ಕೋಅಪರೇಟಿವ್ ಸೊಸೈಟಿಗೆ ಪದಾಧಿಕಾರಿಗಳ ಚುನಾವಣೆ

| Published : Nov 28 2024, 12:30 AM IST

ಅರೇಹಳ್ಳಿ ಕಾಫಿ ಕೋಅಪರೇಟಿವ್ ಸೊಸೈಟಿಗೆ ಪದಾಧಿಕಾರಿಗಳ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಪ್ರಾಂತೀಯ ಸಹಕಾರ ಸಂಘಗಳ ಜಂಟಿ ನಿಬಂಧಕರ ಆದೇಶದ ಮೇರೆಗೆ ಚುನಾವಣಾ ಅಧಿಕಾರಿಯಾಗಿ ಗುರುಮೂರ್ತಿರವರು ಸಹಕಾರ ಸಂಘಗಳ ಕಾಯ್ದೆ ನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. ತೆರವಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಯು.ಪಿ ಮಲ್ಲೇಶ್ ಅಧ್ಯಕ್ಷರಾಗಿ ಹಾಗು ಎಂ.ಆರ್ ವಿನೋದ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಅರೇಹಳ್ಳಿ

ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದಲ್ಲಿರುವ ಕಾಫಿ ಕೋ ಅಪರೇಟಿವ್ ಸೊಸೈಟಿ ನಿಗಮದ ಆಡಳಿತ ಕಚೇರಿಯಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಯ ನೂತನ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಮೈಸೂರು ಪ್ರಾಂತೀಯ ಸಹಕಾರ ಸಂಘಗಳ ಜಂಟಿ ನಿಬಂಧಕರ ಆದೇಶದ ಮೇರೆಗೆ ಚುನಾವಣಾ ಅಧಿಕಾರಿಯಾಗಿ ಗುರುಮೂರ್ತಿರವರು ಸಹಕಾರ ಸಂಘಗಳ ಕಾಯ್ದೆ ನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. ತೆರವಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಅಭ್ಯರ್ಥಿಗಳಾಗಿ ಯು.ಪಿ ಮಲ್ಲೇಶ್ ಹಾಗು ಎಂ.ಆರ್ವಿನೋದ್ ರವರು ನಾಮಪತ್ರ ಸಲ್ಲಿಸಿದ್ದು, ನಿಗದಿತ ಅವಧಿಯಲ್ಲಿ ಇವರುಗಳನ್ನು ಹೊರತುಪಡಿಸಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಯು.ಪಿ ಮಲ್ಲೇಶ್ ಅಧ್ಯಕ್ಷರಾಗಿ ಹಾಗು ಎಂ.ಆರ್ ವಿನೋದ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು.

ಈ ವೇಳೆ ನಿರ್ದೇಶಕರಾದ ಮಂಜುನಾಥ್ ಶೆಟ್ಟಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಈ ನಮ್ಮ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಯು.ಪಿ ಮಲ್ಲೇಶ್ ರವರು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಸಂಘವನ್ನು ಮುನ್ನೆಡಿಸಿಕೊಂಡು ಬಂದಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ ಅತ್ಯುತ್ತಮವಾಗಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸಲಿ ಎಂಬುವುದು ಎಲ್ಲರ ಆಶಯವಾಗಿದೆ. ಆದ್ದರಿಂದಲೇ ಈ ಬಾರಿಯೂ ಸತತ 3ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಹಲವೆಡೆ ಸ್ಥಾಪನೆಯಾಗಿರುವ ಕಾಫಿ ಕೋ ಅಪರೇಟಿವ್ ಸೋಸೈಟಿಯನ್ನು ನಡೆಸಲು ಸಾಧ್ಯವಾಗದೆ ಕೆಲವು ಮುಚ್ಚಿಹೋಗಿವೆ ಅಂಥಹ ಕಠಿಣ ಸಮಯದಲ್ಲಿಯೂ ಬಹಳ ಶ್ರಮದಿಂದ ಮುನ್ನಡೆಸಿಕೊಂಡು ಬಂದಿರುವುದ ಸಾಮಾನ್ಯ ವಿಷಯವಲ್ಲ ಎಂದರು.

ನೂತನ ಅದ್ಯಕ್ಷರಾಗಿ ಆಯ್ಕೆಯಾದ ಯು.ಪಿ ಮಲ್ಲೇಶ್ ರವರು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ಮಾತನಾಡಿ, ಸಂಘದಲ್ಲಿ ನಮ್ಮ ತಾಲೂಕು ಸೇರಿದಂತೆ ಮೂಡಿಗೆರೆ ಹಾಗು ಸಕಲೇಶಪುರ ತಾಲೂಕಿನ ಷೇರುದಾರರು ಸಹ ಇದ್ದು ಎಲ್ಲರ ಸಹಕಾರದಿಂದ ಇಷ್ಟು ವರ್ಷಗಳ ಕಾಲ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಷೇರುದಾರರು ಇನ್ನಷ್ಟು ಷೇರುದಾರರನ್ನು ಕ್ರೋಢೀಕರಿಸುವ ಮೂಲಕ ನಮ್ಮ ಸಂಘವನ್ನು ಇನ್ನಷ್ಟು ಬೆಳೆಸಬೇಕು, ನಮ್ಮ ಸಂಘದ ಎಲ್ಲಾ ಷೇರುದಾರರು ನಮ್ಮಲ್ಲಿಯೇ ವ್ಯವಹರಿಸುತ್ತ ನೆರೆಹೊರೆಯವರಿಗೆ ವ್ಯವಹರಿಸಲು ಸಲಹೆ ನೀಡಬೇಕು. ಆಗಮಾತ್ರ ನಮ್ಮ ಸಂಘವು ಇನ್ನಷ್ಟು ಏಳಿಗೆಯಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.ಈ ವೇಳೆ ಸಂಘದ ನಿರ್ದೇಶಕರುಗಳಾದ ಮಂಜುನಾಥ್ ಶೆಟ್ಟಿ, ಇ.ಎಚ್ ವೀರೇಶ್, ಕೆ.ಬಿ ಪುಟ್ಟರಾಜು, ಸೋಮಯ್ಯ, ಬಿ.ಸಿ ಮೋಹನ್ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಪಿ ಬಸವರಾಜ್, ಉಪಾಧ್ಯಕ್ಷರಾದ ಶಾರಿಬ್ ಉರ್ ರೆಹಮಾನ್,ಬೆಳೆಗಾರರು ಹಾಗೂ ಇತರರು ಹಾಜರಿದ್ದರು.