ಸಾರಾಂಶ
ಬೆಂಗಳೂರಿನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್‌ಗೌಡ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ನೇತೃತ್ವದಲ್ಲಿ ಚುನಾವಣೆಗೆ ಚನ್ನೇಗೌಡನದೊಡ್ಡಿ ಮಹೇಶ್ ಅವರ ಹೆಸರನ್ನು ಅಂತಿಮವಾಗಿ ಆಯ್ಕೆಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ಮನ್ಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮದ್ದೂರು ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಚನ್ನೇಗೌಡನದೊಡ್ಡಿ ಮಹೇಶ್ ಅವರನ್ನು ಅಂತಿಮವಾಗಿ ಕಣಕ್ಕಿಳಿಸಲು ದಳಪತಿಗಳು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್‌ಗೌಡ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ನೇತೃತ್ವದಲ್ಲಿ ಚುನಾವಣೆಗೆ ಚನ್ನೇಗೌಡನದೊಡ್ಡಿ ಮಹೇಶ್ ಅವರ ಹೆಸರನ್ನು ಅಂತಿಮವಾಗಿ ಆಯ್ಕೆಗೊಳಿಸಲಾಗಿದೆ ಎಂದರು.
ಮನ್ಮುಲ್ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್‌ನಿಂದ ತಾಲೂಕಿನಲ್ಲಿ ಬಹಳಷ್ಟು ಮಂದಿ ಆಕಾಂಕ್ಷಿಗಳಾಗಿದ್ದರು. ಆಕಾಂಕ್ಷಿತ ಎಲ್ಲಾ ಜೆಡಿಎಸ್ ಮುಖಂಡರನ್ನು ಮನವೊಲಿಸಲಾಗಿದೆ. ಹಾಗಾಗಿ ಮಹೇಶ್ ಅವರನ್ನು ಅಂತಿಮವಾಗಿ ಕಣಕ್ಕಿಳಿಸಿ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.ಜೆಡಿಎಸ್ ಭದ್ರಕೋಟೆಯಾದ ಮಂಡ್ಯ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕೈಬಲಪಡಿಸುವ ಸಲುವಾಗಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ತಿಮ್ಮೇಗೌಡ ಕೋರಿದರು.
ಜೆಡಿಎಸ್ ಮುಖಂಡ ಕರಡಕೆರೆ ಹನುಮಂತೇಗೌಡ ಮಾತನಾಡಿ, 2025ರ ಫೆಬ್ರವರಿಯಲ್ಲಿ ನಡೆಯಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಚನ್ನೇಗೌಡನದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿರುವ ಮಹೇಶ್ ಅವರನ್ನು ಒಮ್ಮತದಿಂದ ಆಯ್ಕೆಮಾಡಲಾಗಿದೆ ಎಂದರು.ಮತ್ತೊಂದು ಎನ್‌ಡಿಎ ಒಕ್ಕೂಟವಾದ ಬಿಜೆಪಿಯಿಂದ ಇನ್ನೇರಡು ದಿನದಲ್ಲಿ ಅಭ್ಯರ್ಥಿಯನ್ನು ಬಿಜೆಪಿ ವರಿಷ್ಠರಿಂದ ಆಯ್ಕೆಗೊಳಿಸಲ್ಲಿದ್ದಾರೆ. ಈ ಎರಡು ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲು ಮದ್ದೂರು ತಾಲೂಕಿನ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕೆಂದು ಕೋರಿದರು.
ಇದೇ ವೇಳೆ ಮುಖಂಡರಾದ ಗುಡಿಗೆರೆ ಬಸವರಾಜು, ಕುಮಾರ್ ಇದ್ದರು.