ಸಾರಾಂಶ
ಎಲ್ .ವಿ.ನವೀನ್ ಕುಮಾರ್
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಫೆ.10ರಂದು ಚುನಾವಣೆ ನಡೆಯಲಿದೆ. ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರ ಸದಸ್ಯರ ಹೈ ಜಾಕ್ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ಗುಗೆ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿವೆಯಾದರೂ ಈ ಹಿಂದೆ ಜೆಡಿಎಸ್ ಅಧಿಕಾರ ಹಿಡಿಯಲು ಸಹಕರಿಸಿದ್ದ ಜೆಡಿಎಸ್‌ನ ನಿರ್ಮಲಾ ವೇಣುಗೋಪಾಲ್, ಎಂ.ನಂದೀಶ್, ವನಿತಾ, ನರಸಿಂಹೇಗೌಡ ಸೇರಿದಂತೆ ಬಿಜೆಪಿಯ ಪೂರ್ಣಿಮಾ ಪರಮಶಿವ, ಪಕ್ಷೇತರ ಪೂರ್ಣಿಮಾ ಪ್ರಕಾಶ್ ಬದಲಾದ ರಾಜಕೀಯ ಚಿತ್ರಣದಲ್ಲಿ ಕಾಂಗ್ರೆಸ್ ಬಂಧಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಹಾದಿ ಸುಗಮವಾಗಿದೆ.ಪುರಸಭೆಯ ಒಟ್ಟು 23 ಸದಸ್ಯರ ಬಲದಲ್ಲಿ ಜೆಡಿಎಸ್‌ನಿಂದ 12, ಕಾಂಗ್ರೆಸ್‌ನಿಂದ 8, ಪಕ್ಷೇತರ 2 ಹಾಗೂ ಬಿಜೆಪಿಯ 1 ಸದಸ್ಯರು ಆಯ್ಕೆಗೊಂಡಿದ್ದರು. ಜೊತೆಗೆ ಅಂದಿನ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬೆಂಬಲ ಸೇರಿದಂತೆ ಒಬ್ಬರು ಪಕ್ಷೇತರ ಹಾಗೂ ಒಬ್ಬರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಜೆಡಿಎಸ್ ಮೊದಲ ಅವಧಿಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಅಧಿಕಾರದ ಗದ್ದುಗೆ ಏರಿತ್ತು.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲು ಪುನರಾವರ್ತನೆಯಾಗಿದೆ. ಮೀಸಲು ಬದಲಾವಣೆ ಮಾಡುವಂತೆ ಜೆಡಿಎಸ್, ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ನ್ಯಾಯಾಲಯ ಮೆಟ್ಟಿಲೇರಿದ್ದರು. ಅಂತಿಮವಾಗಿ ನ್ಯಾಯಾಲಯ ಪುನರಾವರ್ತನೆಯಾಗಿರುವ ಮೀಸಲನ್ನೇ ಅಂತಿಮಗೊಳಿಸಿದೆ. ಉಳಿದಿರುವ 9 ತಿಂಗಳ ಅವಧಿಗೆ ಪುರಸಭೆ ಗದ್ದುಗೆ ಹಿಡಿಯಲು ಕಾಂಗ್ರೆಸ್ ಸನ್ನದ್ಧವಾಗಿದೆ.ಮೂಲಗಳ ಪ್ರಕಾರ ಹೈಜಾಕ್ ಆಗಿರುವ ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರ ಸದಸ್ಯರು ಕಾಂಗ್ರೆಸ್ ಸದಸ್ಯರೊಂದಿಗೆ ಮಹದೇಶ್ವರಬೆಟ್ಟ, ಬಿಳಗಿರಿರಂಗಯ್ಯನ ಬೆಟ್ಟ ಸೇರಿದಂತೆ ಇತರೆ ಸ್ಥಳಗಳಲ್ಲಿ ಪ್ರವಾಸದಲ್ಲಿದ್ದಾರೆ. ಇಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ರಮೇಶ ಬಂಡೀಸಿದ್ದೇಗೌಡರ ಬೆಂಬಲದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಒಡಂಬಡಿಕೆಯಂತೆ ಅವಿರೋಧವಾಗಿ ಆಯ್ಕೆಗೊಳ್ಳುವ ಮುನ್ಸೂಚನೆ ದೊರೆತಿದೆ.
ಕಾಂಗ್ರೆಸ್‌ನ ಪುರಸಭೆ ಪ್ರಭಾವಿ ಸದಸ್ಯ ಹಾಗೂ ಶಾಸಕರ ಆಪ್ತ ಎಂ.ಎಲ್.ದಿನೇಶ್ ಉಪಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಹೈಜಾಕ್ ಆಗಿರುವ ಮೈತ್ರಿ ಪಕ್ಷದ ಮಹಿಳಾ ಸದಸ್ಯರಿಗೆ ಅದೃಷ್ಟ ಒಲಿಯಲಿದೆ ಎನ್ನಲಾಗುತ್ತಿದೆ. ಸ್ಪಷ್ಟ ಬಹುಮತವಿದ್ದರೂ ಬದಲಾದ ರಾಜಕೀಯ ಚಿತ್ರಣದಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.