ಪೊಲೀಸ್‌ ಸರ್ಪಗಾವಲಲ್ಲಿ ಅರಳಗುಂಡಗಿ 2ನೇ ಅವಧಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

| Published : Jun 28 2024, 12:48 AM IST

ಪೊಲೀಸ್‌ ಸರ್ಪಗಾವಲಲ್ಲಿ ಅರಳಗುಂಡಗಿ 2ನೇ ಅವಧಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಳಗುಂಡಗಿ ಗ್ರಾಮ ಪಂಚಾಯತಿ 2 ನೇ ಅವಧಿಗೆ ಅಧ್ಯಕ್ಷರ ಆಯ್ಕೆಗೆ ಇಂದು ಗುರುವಾರ ಬಿಗಿ ಪೊಲೀಸ್‌ ಭದ್ರತೆಯಲ್ಲಿ , 144 ಸೆಕ್ಷನ್ ಜಾರಿಯೊಂದಿಗೆ ಚುನಾವಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ/ಯಡ್ರಾಮಿ

ತಾಲ್ಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತಿ 2 ನೇ ಅವಧಿಗೆ ಅಧ್ಯಕ್ಷರ ಆಯ್ಕೆಗೆ ಇಂದು ಗುರುವಾರ ಬಿಗಿ ಪೊಲೀಸ್‌ ಭದ್ರತೆಯಲ್ಲಿ , 144 ಸೆಕ್ಷನ್ ಜಾರಿಯೊಂದಿಗೆ ಚುನಾವಣೆ ನಡೆಯಿತು, ಅಧ್ಯಕ್ಷ ಚುನಾವಣೆ ಮುಗಿಯುತ್ತಿದ್ದಂತೆಯೇ ಇಬ್ಬರು ಗ್ರಾಮ ಪಂಚಾಯತಿ ಸದಸ್ಯರ ಬಂಧನ ಮಾಡಿದ ಘಟನೆಯೂ ನಡೆದಿದೆ.

ಅರಳಗುಂಡಗಿ 25 ಸದಸ್ಯರು ಇರುವ ಗ್ರಾಮ ಪಂಚಾಯತಿಗೆ 2ನೇ ಅವಧಿಗೆ ಅಧ್ಯಕ್ಷರಾಗಿ ಸಪ್ನಾ ನಿಂಗರಾಜ ಕಡಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಎರಡನೇ ಅವಧಿಗೆ( ಎಸ್.ಸಿ ) ಮೀಸಲಾಗಿತ್ತು. ಅಧ್ಯಕ್ಷ ಸ್ಥಾನದ ಚುನಾವಣೆಗೆ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಇದರಿಂದಾಗಿ ಹಲವು ಬಾರಿ ಗಲಾಟೆ, ವಾಗ್ವಾದ, ಜಗಳಗಳು ನಡೆದಿದ್ದವು.

ಸಪ್ನಾ ಅವರೇ ಪಂಚಾಯ್ತಿಗೆ ಹಂಗಾಮಿ ಅಧ್ಯಕ್ಷರಾಗಿದ್ದರು. ಇದೀಗ ಚುನಾವಣೆಯಲ್ಲಿ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಪ್ನಾ ಗಂಡ ನಿಂಗರಾಜ ಕಡಿ ಅವರಿಗೆ 13 ಮತಗಳು ಪಡೆದು ಜಯಶಾಲಿಯಾದರು. ಇವರ ಪ್ರತಿ ಸ್ಪರ್ಧಿಯಾದ ಲಕ್ಷೀಬಾಯಿ ಸುಬಣ್ಣ ಗೋಬ್ಬರವಾಡಗಿ ಅವರು 12 ಮತಗಳು ಪಡೆದು ಪರಾಭವಗೊಂಡರು ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಗೂ ಮುಂಚೆಯೇ ಅನೇಕ ಬಾರಿ ಗಲಾಟೆಗಳು ನಡೆದಿದ್ದವು ಎಂಬುದು ಗಮನಾರ್ಹ ಸಂಗತಿ. ಚುನಾವಣೆಯ ನಂತರ ಅಧ್ಯಕ್ಷ ಸ್ಥಾನ ಗೆಲವು ಸಾಧಿಸಿದ ಸಪ್ನಾ ಗಂಡ ನಿಂಗರಾಜ ಕಡಿ ಅವರಿಗೆ ಬೆದರಿಕೆ ಹಾಕಿದ್ದಲ್ಲದೆ, ಜಾತಿ ನಿಂದನೆ (ಅಟ್ರಾಸಿಟಿ) ಮಾಡಿದ್ದಾರೆಂದು ಕೆಲ ದಿನಗಳ ಹಿಂದೆ ಯಡ್ರಾಮಿ ಠಾಣೆಯಲ್ಲಿ ದಾಖಲಾಗಿದ್ದ ದೌರ್ಜನ್ಯ ಕಾಯಿದೆಯಡಿಯಲ್ಲಿ ಜಾತಿ ನಿಂದನೆ ಪ್ರಕರಣದಲ್ಲಿ ಪಂಚಾಯ್ತಿಯ ಸದಸ್ಯರಾದ ಮಾಹಾಂತೇಶ ಶ್ರೀಗಿರಿ ಹಾಗೂ ರಾಜು ಗೌಂಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಚುನಾವಣೆಯಾದ ತಕ್ಷಣವೇ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಹೊತ್ತಿದ್ದ ಸದಸ್ಯರಾದ ಮಾಹಾಂತೇಶ ಶ್ರೀಗಿರಿ ಹಾಗೂ ರಾಜು ಗೌಂಡಿ ಇವರನ್ನು ಪೊಲೀಸರು ವಶಕ್ಕೆ ಪಡೆದಾಗ ಊರಲ್ಲಿನ ವಾತಾವರಣದಲ್ಲಿ ಉದ್ವಿಗ್ನತೆ ಇಣುಕಿತ್ತು.

ಗ್ರಾಮ ಪಂಚಾಯ್ತಿ ಸದಸ್ಯರಿಬ್ಬರಿಗೆ ಪೊಲೀಸರು ಬಂಧಿಸಿದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಅರಳಗುಂಡಗಿ ಗ್ರಾಮದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು. ಎಲ್ಲಾ ಅಂಗಡಿ ಮುಗಟ್ಟುಗಳು ಬಂದ್ ಆಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ಚುನಾವಣೆಯ ಪ್ರಕ್ರಿಯೆ ಪೂರ್ತಿ ಮುಗಿಯುವವರೆಗೂ ಈ ಸಂದರ್ಭದಲ್ಲಿ ಪ್ರಭಾರಿ ಎಸ್.ಪಿ.ಸೇರಿ 130 ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ಅರಳಗುಂಡಗಿ ಗ್ರಾಮ ಪಂಚಾಯತಿಗೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ನೇಮಕವಾಗಿದ್ದ ಸ್ವಪ್ನಾ ನಿಂಗರಾಜ ಕಡಿ ಅವರ ಮೇಲೆ ಹಲ್ಲೆ ಮಾಡಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಜೇವರ್ಗಿ ದಲಿತ ಸಂಘಟನೆಗಳ ದಲಿತ ಸಮನ್ವಯ ಸಮಿತಿ ಪಧಾದಿಕಾರಿಗಳು ಎಸ್ಪಿಗೆ ಬುಧುವಾರವಷ್ಟೇ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಘಟನೆ ಕುರಿತು ಅರಳಗುಂಡಗಿಯ ಶರಣಗೌಡ ಹಿರೇಗೌಡ ಸೇರಿದಂತೆ 5 ಜನರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂದಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಈ ಕುರಿತು ಯಡ್ರಾಮಿ ಪಿಎಸ್‍ಐಗೆ ಸೂಚನೆ ನೀಡಬೇಕು. ಚುನಾವಣೆ ಶಾಂತಿಯುತವಾಗಿ ನಡೆಯುವಂತೆ ಮಾಡಬೇಕು ಎಂದು ಜೇವರ್ಗಿ ದಲಿತ ಸಂಘಟನೆಗಳ ದಲಿತ ಸಮನ್ವಯ ಸಮಿತಿ ಮನವಿ ಮಾಡಿತ್ತು.