ಸಾರಾಂಶ
-ಚುನಾವಣಾ ಅಧಿಕಾರಿ ಬಸಲಿಂಗಪ್ಪ ನೈಕೋಡಿ ಆದೇಶ
-6ರಂದು ಬೆಳಿಗ್ಗೆ 11 ಗಂಟೆಗೆ ಹುಣಸಗಿ ಪ.ಪಂ ಸದಸ್ಯರುಗಳ ಸಭೆ------
ಕನ್ನಡಪ್ರಭ ವಾರ್ತೆ ಹುಣಸಗಿ16 ಚುನಾಯಿತ ಸದಸ್ಯರನ್ನು ಹೊಂದಿರುವ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸಾಮಾನ್ಯ ಸ್ಥಾನಕ್ಕೆ ಮೀಸಲಿಡಲಾಗಿದ್ದು, ಈ ಎರಡೂ ಸ್ಥಾನಗಳಿಗೆ ಸೆ.6 ರಂದು ಮಧ್ಯಾಹ್ನ 1.15 ಕ್ಕೆ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಬಸಲಿಂಗಪ್ಪ ನೈಕೋಡಿ ಆದೇಶಿಸಿದ್ದಾರೆ.
ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ 42 ಹಾಗೂ ಕರ್ನಾಟಕ ಪುರಸಭೆಗಳ (ಅಧ್ಯಕ್ಷ ಮತ್ತು ಉಪಾಧ್ಯಕ್ಷ) ಚುನಾವಣೆ (ತಿದ್ದುಪಡಿ) ನಿಯಮಗಳ 1995 ರ ನಿಯಮ 3ರ ಪ್ರಕಾರ 6ರಂದು ಬೆಳಿಗ್ಗೆ 11 ಗಂಟೆಗೆ ಹುಣಸಗಿ ಪ.ಪಂ ಸದಸ್ಯರುಗಳ ಸಭೆಯನ್ನು ಕರೆಯಲಾಗಿದೆ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಿರುವ ಸ್ಥಾನಕ್ಕೆ ಚುನಾಯಿತ ಸದಸ್ಯರು ಚುನಾವಣೆಗೆ ನಾಮನಿರ್ದೇಶನ ಸಲ್ಲಿಸಲು 6ರಂದು ಮುಂಜಾನೆ 11 ರಿಂದ 11.35 ರವರೆಗೆ, ನಾಮಪತ್ರ ಪರಿಶೀಲನೆ 11.35 ರಿಂದ 12 ಗಂಟೆಯವರೆಗೆ, ನಾಮನಿರ್ದೇಶನ ಪತ್ರ ಹಿಂಪಡೆಯಲು 12 ರಿಂದ 12.45 ರವರೆಗೆ ನಂತರ 1.15 ಕ್ಕೆ ಅಧ್ಯಕ್ಷ ಚುನಾವಣೆ ನಡೆದ ನಂತರ ಉಪಾಧ್ಯಕ್ಷ ಚುನಾವಣೆ ನಡೆಯಲಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕಳೆದ ಡಿ.27 ರಂದು ಹುಣಸಗಿ ಪ.ಪಂ ಚುನಾವಣೆ ನಡೆದು 8 ತಿಂಗಳ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗೆ ಕಾಲ ಕೂಡಿ ಬಂದಿದ್ದು, ಒಟ್ಟು 16 ಸದಸ್ಯರಲ್ಲಿ 14 ಜನ ಕಾಂಗ್ರೆಸ್, 2 ಬಿಜೆಪಿ ಸದಸ್ಯರಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಡಳಿತ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಆದರೂ ಫಲಿತಾಂಶ ನಿರೀಕ್ಷಿಸಬೇಕಿದೆ.ಬಹುದಿನಗಳ ಬಳಿಕ ಮೀಸಲಾತಿ ಪ್ರಕಟಗೊಂಡಿದ್ದರಿಂದ ನೂತನ ಆಡಳಿತ ರಚಿಸಲು ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಯ ಮಾದಿಗ, ಚಲುವಾದಿ, ಬಂಜಾರ ಈ ಮೂರು ಸಮುದಾಯದ ಸದಸ್ಯರು ತಮ್ಮದೆ ಮುಖಂಡರೊಂದಿಗೆ ಅಧ್ಯಕ್ಷ ಗಾದೆಗೆ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎನ್ನುವುದು 6ರಂದು ಕಾದು ನೋಡಬೇಕಿದೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ವಿಷಯದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ನಾಗಣ್ಣ ಸಾಹು ದಂಡಿನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಆರ್.ಎಂ. ರೇವಡಿ, ಬಸವರಾಜ ಸಜ್ಜನ್ ಸೇರಿದಂತೆ ಇನ್ನಿತರ ಮುಖಂಡರ ತೀರ್ಮಾನವೇ ಸುಪ್ರೀಮ್. ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ಸರ್ಕಾರವೇ ನೆರವಿಗಿರುವುದಿಂದ ಹೊಸ ಪ.ಪಂ. ಸರ್ವಾಂಗೀಣ ಅಭಿವದ್ಧಿಯ ಕೊಡುಗೆ ನೀಡುವುದೆಂಬ ವಿಶ್ವಾಸ ನಾಗರಿಕರು ಜನಪ್ರತಿನಿಧಿಗಳ ಮೇಲೆ ಇಟ್ಟಿದ್ದಾರೆ.--------
31ವೈಡಿಆರ್10: ಹುಣಸಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯ.