ಚುನಾವಣೆಗೆ ಬಿಜೆಪಿಗರದು ಭಾವನಾತ್ಮಕ ತಂತ್ರ: ಸಚಿವ ಡಿ.ಸುಧಾಕರ್

| Published : Mar 25 2024, 12:52 AM IST

ಚುನಾವಣೆಗೆ ಬಿಜೆಪಿಗರದು ಭಾವನಾತ್ಮಕ ತಂತ್ರ: ಸಚಿವ ಡಿ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ನೆಹರೂ ಮೈದಾನದಲ್ಲಿರುವ ರೋಟರಿ ಸಭಾಭವನದಲ್ಲಿ ಭಾನುವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಬಿಎಲ್‌ಎ ಗಳ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ ನೀಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಜನರನ್ನು ಭಾವನಾತ್ಮಕವಾಗಿ ಮರುಳು ಮಾಡಿ ಅಧಿಕಾರ ಪಡೆಯುವುದು ಬಿಜೆಪಿಯ ನೀತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆರೋಪಿಸಿದರು.

ನಗರದ ನೆಹರೂ ಮೈದಾನದಲ್ಲಿರುವ ರೋಟರಿ ಸಭಾಭವನದಲ್ಲಿ ಭಾನುವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಬಿಎಲ್‌ಎಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಜನಪರ ವಾಗಿ ಯೋಚಿಸುವ, ಜನಪರ ಕಾರ್ಯಕ್ರಮ ನೀಡುವ, ಜನರ ಬದುಕನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತದೆ ಎಂಬುದು ಮೊದಲಿನಿಂದಲೂ ಸಾಬೀತಾಗುತ್ತಾ ಬರುತ್ತಿದೆ. ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದರಲ್ಲಿ ಕಾಂಗ್ರೆಸ್ ಯಾವಾಗಲೂ ಮುಂದಿದೆ. ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ ಮತ್ತು ನಡೆಯುತ್ತೇವೆ.

ಕೇಂದ್ರ ಸರ್ಕಾರದ ಹಸಿ ಸುಳ್ಳುಗಳನ್ನು ಜನರಿಗೆ ಪಕ್ಷದ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು. ಯಾವ ಕ್ಷಣದಲ್ಲೂ ಕಾರ್ಯಕರ್ತರು ಮೈ ಮರೆಯದೆ ಕೆಲಸ ಮಾಡಬೇಕು. ವಾಸ್ತವ ಸ್ಥಿತಿಯನ್ನು ಜನರಿಗೆ ತಿಳಿಸಬೇಕು.

ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ ಐದು ಸಾವಿರದ ಮುನ್ನೂರು ಕೋಟಿಯಲ್ಲಿ ಬಿಡಿಗಾಸೂ ಬರಲಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳನ್ನು ಪೋಷಿಸಿಕೊಂಡು ಸಣ್ಣ ಸಣ್ಣ ಉದ್ದಿಮೆದಾರರನ್ನು ಸಂಕಷ್ಟಕ್ಕೆ ದೂಡಿದೆ. ಸಾಕಷ್ಟು ಸರ್ಕಾರಿ ಸೌಮ್ಯದ ಕಂಪನಿಗಳನ್ನು ಮಾರಾಟ ಮಾಡಲಾಗಿದೆ. ಯುವ ಜನರಿಗೆ ಹುಸಿ ಭರವಸೆ ನೀಡಿ ಮತ ಪಡೆಯುವ ಸರಕನ್ನಾಗಿ ಮಾಡಿಕೊಂಡಿರುವ ಬಿಜೆಪಿ ಯುವಕರನ್ನು ಅಗೌರವಿಸಿದೆ. ಇನ್ನು, ರೈತರ ಮೇಲೆ ನಿರಂತರವಾದ ದಬ್ಬಾಳಿಕೆಯನ್ನು ಮಾಡಿದೆ. ಜನವಿರೋಧಿ ಕೇಂದ್ರ ಸರ್ಕಾರದ ನೀತಿಗಳನ್ನು ಮನೆ ಮನೆಗಳಿಗೆ ತಲುಪಿಸುವ ಕೆಲಸ ಕಟ್ಟುನಿಟ್ಟಾಗಿ ಆಗಬೇಕು. ಆ ಮೂಲಕ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪರನ್ನು ಗೆಲ್ಲಿಸಲು ಕಾರ್ಯಕರ್ತರು ಪಣತೊಡಬೇಕು ಎಂದರುಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಪಕ್ಷ ನನ್ನ ಸೇವೆ ಮತ್ತು ಪಕ್ಷ ನಿಷ್ಠೆಯನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ನನಗೆ ಕಾರ್ಯಕರ್ತರೇ ಜೀವಾಳ. ಕಾರ್ಯಕರ್ತರು ತಮ್ಮ ಬೂತ್ ವ್ಯಾಪ್ತಿಯಲ್ಲಿ ಅದಷ್ಟು ಹೆಚ್ಚಿನ ಪ್ರಮಾಣದಲ್ಲಿ ಶ್ರಮವಹಿಸಿ ನನ್ನ ಗೆಲುವಿಗೆ ಶ್ರಮಿಸಿ ಎಂದು ಮನವಿ ಮಾಡಿದರು.

ಚಳ್ಳಕೆರೆ ಶಾಸಕ ರಘುಮೂರ್ತಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ಕಳೆದ ಚುನಾವಣೆಯಲ್ಲಿ ಅದ ಪ್ರಮಾದಗಳನ್ನು ಮತ್ತೆ ಮಾಡದೆ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು ಎಂದರು

ಇದೇ ವೇಳೆ ರಾಮನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾರವರು ಬೂತ್ ಮಟ್ಟದಲ್ಲಿ ಏಜೆಂಟರು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ, ಮತ ಸೆಳೆಯಲು ಅನುಸರಿಸಬೇಕಾದ ಮಾರ್ಗಗಳ ಕುರಿತು ಬೂತ್ ಮಟ್ಟದ ಏಜೆಂಟರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆ ಬಿಎಲ್ಎ ಉಸ್ತುವಾರಿ ಎಎಂ ಅಮೃತೇಶ್ವರ ಸ್ವಾಮಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇ ಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಗೀತಾ ನಾಗಕುಮಾರ್, ಕೃಷ್ಣಮೂರ್ತಿ, ಜಿ ಎಲ್.ಮೂರ್ತಿ, ಶಿವರಂಜಿನಿ, ಕಲ್ಲಟ್ಟಿ ಹರೀಶ್, ದಾದಾಪೀರ್, ಶಿವಕುಮಾರ್, ಜ್ಞಾನೇಶ್, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.