ಇಂದು ಕಾರವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

| Published : Aug 21 2024, 12:42 AM IST

ಇಂದು ಕಾರವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಶತಾಯಗತಾಯ ನಗರಸಭೆಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರನ್ನು ಸೆಳೆದುಕೊಳ್ಳಲು ಪ್ರಯತ್ನ ನಡೆಸುತ್ತಿದೆ.

ಕಾರವಾರ: ಬಿಜೆಪಿ ಹಾಗೂ ಕಾಂಗ್ರೆಸ್ ಸಮ ಸದಸ್ಯ ಬಲದ ಕಾರವಾರ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಬುಧವಾರ ನಡೆಯಲಿದ್ದು, ಎರಡೂ ಪಕ್ಷಗಳು ರೆಸಾರ್ಟ್‌ ರಾಜಕೀಯ ನಡೆಸುತ್ತಿವೆ. ಸದ್ಯ ನಗರಸಭೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 4 ಹಾಗೂ ಪಕ್ಷೇತರರು 5 ಹೀಗೆ ಒಟ್ಟೂ 31 ಸದಸ್ಯರಿದ್ದಾರೆ. ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರು ಬಿಜೆಪಿಯವರಾಗಿದ್ದು, ಅವರಿಗೂ ಮತದ ಅಧಿಕಾರ ಇದೆ. ಶಾಸಕರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದು, ಅವರ ಮತವೂ ಸೇರಿ ಒಟ್ಟೂ 34 ಮತಗಳಾಗಲಿವೆ. ಅಧಿಕಾರಕ್ಕೇರಲು 18 ಸದಸ್ಯರ ಬೆಂಬಲ ಬೇಕೆ ಬೇಕು. ಬಿಜೆಪಿ, ಜೆಡಿಎಸ್ ಹಾಗೂ ಮೂವರು ಪಕ್ಷೇತರರು ಸೇರಿ 18 ಸದಸ್ಯರಾದರೆ. ಸಂಸದ, ವಿಧಾನಪರಿಷತ್‌ ಸದಸ್ಯರು ಸೇರಿ 20 ಮತಗಳಾಗಲಿವೆ ಎನ್ನುವುದು ಮೇಲ್ನೋಟಕ್ಕೆ ಬಿಜೆಪಿಯ ಲೆಕ್ಕಾಚಾರ. ತನ್ನ ಸದಸ್ಯರನ್ನು ಸೆಳೆಯಬಹುದು ಎಂದು ಬಿಜೆಪಿ ತನ್ನೆಲ್ಲ ಸದಸ್ಯರನ್ನು ಗೋವಾದ ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಂಡಿದೆ. ಈ ಬಾರಿ ಶತಾಯಗತಾಯ ನಗರಸಭೆಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರನ್ನು ಸೆಳೆದುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಮೇಲಾಗಿ ತನ್ನ ಸದಸ್ಯರು ಭದ್ರವಾಗಿರಲೆಂದು ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಂಡಿದೆ. ಈ ನಡುವೆ ಕಾಂಗ್ರೆಸ್ ಬುಟ್ಟಿಗೆ ಕೈ ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ. ಉಭಯ ಪಕ್ಷಗಳ ಮೇಲಾಟದಿಂದ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎನ್ನುವ ಕುತೂಹಲ ಉಂಟಾಗಿದೆ.ಇಂದು ಯಲ್ಲಾಪುರ ಪಪಂ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಬುಧವಾರ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯೆ ನರ್ಮದಾ ನಾಯ್ಕ ಅಧ್ಯಕ್ಷೆ, ಅಮಿತ್ ಅಂಗಡಿ ಉಪಾಧ್ಯಕ್ಷ, ಅಬ್ದುಲ್ ಅಲಿ ಕೆ. ಹಮೀದ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಹೆಬ್ಬಾರ ಬಣದ ೧೦ ಸದಸ್ಯರು, ಬಿಜೆಪಿಯ ೫ ಸದಸ್ಯರು, ಕಾಂಗ್ರೆಸ್ಸಿನ ೩ ಸದಸ್ಯರು, ಪಕ್ಷೇತರ ೧ ಸದಸ್ಯರು ಇದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೆಬ್ಬಾರ ಬಣದ ಎಲ್ಲ ಸದಸ್ಯರು, ಕಾಂಗ್ರೆಸ್ ಪಕ್ಷದ ನರ್ಮದಾ ನಾಯ್ಕ ಅವರಿಗೆ ಬೆಂಬಲಿಸುವ ಬಗ್ಗೆ ನಿರ್ಣಯಿಸಲಾಗಿದೆ ಎನ್ನಲಾಗಿದೆ. ಆದರೆ, ರಾಜಕೀಯದಲ್ಲಿ ಏನೂ ಆಗಬಹುದು ಎಂಬುದನ್ನು ಅಲ್ಲಗಳೆಯಲಾಗದು.ಆದರೆ, ಹೆಬ್ಬಾರರ ಅಭಿಮಾನಿ ಬಳಗದಲ್ಲಿರುವವರೇ ೧೦ ಜನ ಸದಸ್ಯರಿರುವುದರಿಂದ ಬಿಜೆಪಿಯವರು ಮೂರೇ ಜನರಿರುವುದರಿಂದ ಇಲ್ಲಿ ಚುನಾವಣೆ ನಡೆಯಲಿಕ್ಕಿಲ್ಲ ಅಥವಾ ನಡೆದರೂ ಸಾಂಕೇತಿಕ ಆದೀತು.