ಇಂದು ಮೇಯರ್‌-ಉಪ ಮೇಯರ್‌ ಚುನಾವಣೆ: ಬಿಜೆಪಿಯಿಂದ ಮನೋಜ್‌ ಕುಮಾರ್‌, ಭಾನುಮತಿ ಆಯ್ಕೆ

| Published : Sep 19 2024, 01:53 AM IST

ಇಂದು ಮೇಯರ್‌-ಉಪ ಮೇಯರ್‌ ಚುನಾವಣೆ: ಬಿಜೆಪಿಯಿಂದ ಮನೋಜ್‌ ಕುಮಾರ್‌, ಭಾನುಮತಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಒಟ್ಟು 60 ಸದಸ್ಯಬಲದ ಪಾಲಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್‌ 14, ಎಸ್‌ಡಿಪಿಐ 2 ಸ್ಥಾನ ಹೊಂದಿದೆ. ಹಾಲಿ ಆಡಳಿತದ ಅವಧಿ ಐದು ತಿಂಗಳು ಆಗಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಸೆ.19ರಂದು ಚುನಾವಣೆ ನಡೆಯುತ್ತಿದೆ. ಮೇಯರ್‌ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಎಸ್‌ಸಿ) ಹಾಗೂ ಉಪ ಮೇಯರ್‌ಗೆ ಹಿಂದುಳಿದ ವರ್ಗ ಎ ಮೀಸಲು ನಿಗದಪಡಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಮೈಸೂರಿನ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ.

ಒಟ್ಟು 60 ಸದಸ್ಯಬಲದ ಪಾಲಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್‌ 14, ಎಸ್‌ಡಿಪಿಐ 2 ಸ್ಥಾನ ಹೊಂದಿದೆ. ಹಾಲಿ ಆಡಳಿತದ ಅವಧಿ ಐದು ತಿಂಗಳು ಆಗಿರುತ್ತದೆ.

ಈ ಬಾರಿ ಹಾಲಿ ಪಾಲಿಕೆ ಆಡಳಿತದ ಕೊನೆ ಅವಧಿಯ ಆಯ್ಕೆ ಇದಾಗಿದ್ದು, ಬಿಜೆಪಿ ಬಹುತಮದ ಸದಸ್ಯಬಲ ಹೊಂದಿದೆ. ಹೀಗಾಗಿ ಬಿಜೆಪಿಯಿಂದ ಮೇಯರ್‌ ಸ್ಥಾನಕ್ಕೆ ಮಂಗಳೂರು ಉತ್ತರ ಕ್ಷೇತ್ರದ 17ನೇ ದೇರೇಬೈಲ್‌ ಉತ್ತರ ವಾರ್ಡ್‌ನ ಸದಸ್ಯ ಮನೋಜ್‌ ಕುಮಾರ್‌ ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ 58ನೇ ಬೋಳ‍ಾರ ವಾರ್ಡ್‌ನ ಭಾನುಮತಿ ಇವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್‌ನಿಂದ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹತೆಯ ಸದಸ್ಯರು ಇಲ್ಲ. ಉಪ ಮೇಯರ್ ಸ್ಥಾನಕ್ಕೆ ಯಾರನ್ನು ಕಣಕ್ಕೆ ಇಳಿಸುತ್ತಾರೆ ಅಥವಾ ಇಳಿಸುವುದಿಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ಬಿಜೆಪಿಯ ಜಿಲ್ಲಾ ಕಚೇರಿಯಲ್ಲಿ ಬುಧವಾರ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆ ನಡೆಯಿತು.

ಈ ಸಭೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ಪಾಲಿಕೆ ನಿರ್ಗಮನ ಮೇಯರ್‌ ಸುಧೀರ್‌ ಶೆಟ್ಟಿ, ಉಪ ಮೇಯರ್ ಸುನಿತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡರಾದ ನಿತಿನ್‌ ಕುಮಾರ್‌, ರವಿಶಂಕರ್ ಮಿಜಾರ್‌, ಯತೀಶ್ ಆರ್ವಾರ್‌, ಕಿಶೋರ್ ಕುಮಾರ್‌ ಬೊಟ್ಯಾಡಿ, ಉಭಯ ಮಂಡಲಗಳ ಅಧ್ಯಕ್ಷರಾದ ರಮೇಶ್‌ ಕಂಡೆಟ್ಟು, ರಾಜೇಶ್‌ ಕೊಟ್ಟಾರಿ ಇದ್ದರು.