ಕಗ್ಗಂಟಾಗುತ್ತಾ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ

| Published : Aug 20 2024, 12:50 AM IST

ಕಗ್ಗಂಟಾಗುತ್ತಾ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಪ ಸದಸ್ಯರುಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಬಿಜೆಪಿ ಸದಸ್ಯರ ಮೇಲಿನ ಕ್ರಿಮಿನಲ್ ಮೊಕದ್ದಮೆ ಹೀಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕಗ್ಗಂಟಾಗುವ ಎಲ್ಲ ಲಕ್ಷಣಗಳಿವೆ

ಶಿವಕುಮಾರ ಕುಷ್ಟಗಿ ಗದಗ

ಗದಗ-ಬೆಟಗೇರಿ ನಗರಸಭೆಯ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಸರ್ಕಾರ ಮೀಸಲಾತಿ ಪ್ರಕಟಿಸಿದ ನಂತರ ಅವಳಿ ನಗರದಲ್ಲಿ ರಾಜಕೀಯ ಬಿರುಸುಗೊಂಡಿತ್ತು. ಆದರೆ ಹಿಂದಿನ 30 ತಿಂಗಳ ಅವಧಿಯ ಕೊನೆಯ ಘಳಿಗೆಯಲ್ಲಿ ಪೌರಾಯುಕ್ತರ ಸಹಿ ನಕಲಿ ಮಾಡಲಾಗಿದೆ ಎಂದು ಪೌರಾಯುಕ್ತರೇ ಆ.14 ರಂದು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು. ಆಯ್ಕೆ ಪ್ರಕ್ರಿಯೆ ಕಗ್ಗಂಟಾಗುವ ಎಲ್ಲ ಲಕ್ಷಣ ಗೋಚರವಾಗುತ್ತಿವೆ.

35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 18 ಮತ್ತು ಕಾಂಗ್ರೆಸ್ 17 ಸ್ಥಾನ ಪಡೆದಿದ್ದು, ಬಿಜೆಪಿ ಒಂದು ಮತಗಳಿಂದ ಅಧಿಕಾರ ಹಿಡಿದು ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಉಷಾ ದಾಸರ, ಉಪಾಧ್ಯಕ್ಷರಾಗಿ ಸುನಂದಾ ಬಾಕಳೆ ಅಧಿಕಾರ ನಡೆಸಿದರು. ಈಗ ಎರಡನೇ ಅವಧಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುವ ಪೂರ್ವದಲ್ಲಿಯೇ ಕಾಂಗ್ರೆಸ್ ನ ವಿಪ ಸದಸ್ಯ ಸಲೀಂ ಅಹ್ಮದ, ಬಿಜೆಪಿಯ ಎಸ್.ವಿ.ಸಂಕನೂರ ಗದಗ ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, ಇದರ ಅಂತಿಮ ವಿಚಾರಣೆ ಆ.22 ರಂದು ನಡೆಯುವ ಸಾಧ್ಯತೆ ಇದೆ. ಇದು ಕೂಡಾ 2ನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ವಿಳಂಬವಾಗಲು ಕಾರಣವಾಗಲಿದೆ.

ಕ್ರಿಮಿನಲ್ ಮೊಕದ್ದಮೆ: ಸಾವಿರಾರು ಕೋಟಿ ಬೆಲೆಬಾಳುವ ನಗರಸಭೆಯ 54 ವಕಾರ (ಖಾಲಿ ಜಾಗೆ) ಗಳ ಲೀಜ್ ಅವಧಿ ವಿಸ್ತರಣೆಯ ಠರಾವಿನ ವಿಷಯದಲ್ಲಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ನನ್ನ ಸಹಿಯನ್ನೇ ನಕಲಿ ಮಾಡಿದ್ದಾರೆ ಎಂದು ಅಂದಿನ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಉಲ್ಲೇಖವಾಗಿರುವ 3 ಜನ ಬಿಜೆಪಿ ಸದಸ್ಯರು ಸದ್ಯಕ್ಕೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರಿಗೆ ನಿರೀಕ್ಷಣಾ ಜಾಮೀನು ಸಿಗುವವರೆಗೂ ಅವರು ಆಚೆ ಬರುವ ಸಾಧ್ಯತೆ ಕಡಿಮೆ. ಇದು ಕೂಡಾ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲು ಪ್ರಮುಖ ಕಾರಣವಾಗಲಿದೆ.

ವಿಪ ಸದಸ್ಯರುಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಬಿಜೆಪಿ ಸದಸ್ಯರ ಮೇಲಿನ ಕ್ರಿಮಿನಲ್ ಮೊಕದ್ದಮೆ ಹೀಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕಗ್ಗಂಟಾಗುವ ಎಲ್ಲ ಲಕ್ಷಣಗಳಿವೆ, ಆದರೆ ಸದ್ಯ ಬಿಜೆಪಿಯವರು ಎದುರಿಸುತ್ತಿರುವ ಅಸಹಾಯಕ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದ್ದರೆ. ಬೇಲ್ ಪಡೆದು ಮತ್ತೆ ಅಧಿಕಾರ ಹಿಡಿಯಬೇಕು ಎನ್ನುವ ತವಕದಲ್ಲಿ ಬಿಜೆಪಿ ಇದೆ.

ಬಿಜೆಪಿಗೆ ಕಂಟಕವಾಗುತ್ತಾ 2 ನೇ ಅವಧಿ: 120 ವರ್ಷಗಳ ನಗರಸಭೆಯ ಇತಿಹಾಸದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಕೇವಲ 2 ಬಾರಿ, ಆದರೆ ಬಿಜೆಪಿ ಪಾಲಿಗೆ 2 ನೇ ಅವಧಿ ಎನ್ನುವುದು ಕಂಟಕ ಎನ್ನುವಂತಾಗಿದ್ದು, 2009 ರಲ್ಲಿಯೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿದ್ದ ಬಿಜೆಪಿಯ ಕೆಲ ಸದಸ್ಯರೇ ಕಾಂಗ್ರೆಸ್ ಬೆಂಬಲಿಸಿದ ಹಿನ್ನೆಲೆಯಲ್ಲಿ ಅಂದು ಕೂಡಾ 2ನೇ ಅವಧಿಗೆ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿತ್ತು. ಈಗಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪ್ರಕರಣ ಎದುರಿಸುತ್ತಿರುವ 3 ಜನ ಸದಸ್ಯರಿಗೆ ಬೇಲ್ ಸಿಗದೇ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾದಲ್ಲಿ ಸಹಜವಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ.

ನಗರಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದೆ, ನಾವು ಯಾರನ್ನೂ ಸೆಳೆಯುವ ಪ್ರಶ್ನೆಯೇ ಇಲ್ಲ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾದ ನಂತರ ನಮ್ಮ ಪಕ್ಷಕ್ಕೆ ಸ್ವಯಂ ಇಚ್ಛೆಯಿಂದ ಬೆಂಬಲಿಸುವುದಾರೆ ಬೆಂಬಲಿಸಲಿ, ಬರುವುದಾದರೂ ಬರಲಿ, ಅವರ ಬೆಂಬಲ ತೆಗೆದುಕೊಂಡು ನಾವು ಅಧಿಕಾರಕ್ಕೆ ಬರುತ್ತೇವೆ. ಸದ್ಯಕ್ಕೆ ಅದರ ಬಗ್ಗೆ ಯಾವುದೇ ಚರ್ಚೆ ಇಲ್ಲ. ನ್ಯಾಯಾಲಯದಲ್ಲಿನ ಪ್ರಕರಣದ ಬಗ್ಗೆ ನಾನು ಮಾತನಾಡಲ್ಲ ಎಂದು ನಗರಸಭೆಯ ವಿರೋಧ ಪಕ್ಷದ ನಾಯಕ ಎಲ್. ಡಿ. ಚಂದಾವರಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಕುತಂತ್ರದಿಂದ ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕು ಎಂದು ನಮ್ಮ ಸದಸ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಈ ಕುರಿತು ನಾವು ಕೂಡಾ ಕಾನೂನು ಹೋರಾಟ ಮಾಡುತ್ತೇವೆ. ನಮಗೆ ಸ್ಪಷ್ಟ ಬಹುಮತವಿದೆ. ನಾವು ಅಧಿಕಾರ ನಡೆಸುತ್ತೇವೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ.ಎಂ. ಹಿರೇಮಠ ಹೇಳಿದ್ದಾರೆ.