ಚುನಾವಣೆ ಸಿದ್ಧತೆ ಪೂರ್ಣ: ಮತಗಟ್ಟೆಗಳತ್ತ ಸಿಬ್ಬಂದಿ ಹೆಜ್ಜೆ

| Published : Apr 26 2024, 12:52 AM IST

ಚುನಾವಣೆ ಸಿದ್ಧತೆ ಪೂರ್ಣ: ಮತಗಟ್ಟೆಗಳತ್ತ ಸಿಬ್ಬಂದಿ ಹೆಜ್ಜೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ವಿದ್ಯುನ್ಮಾನ ಮತಯಂತ್ರ (ಇವಿಎಂ) ಸೇರಿದಂತೆ ವಿವಿಧ ಚುನಾವಣಾ ಪರಿಕರಗಳನ್ನು ಪಡೆದ ಚುನಾವಣೆ ಸಿಬ್ಬಂದಿ ಮತಗಟ್ಟೆ ಕೇಂದ್ರಗಳತ್ತ ಗುರುವಾರ ಹೆಜ್ಜೆ ಹಾಕಿದರು.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ವಿದ್ಯುನ್ಮಾನ ಮತಯಂತ್ರ (ಇವಿಎಂ) ಸೇರಿದಂತೆ ವಿವಿಧ ಚುನಾವಣಾ ಪರಿಕರಗಳನ್ನು ಪಡೆದ ಚುನಾವಣೆ ಸಿಬ್ಬಂದಿ ಮತಗಟ್ಟೆ ಕೇಂದ್ರಗಳತ್ತ ಗುರುವಾರ ಹೆಜ್ಜೆ ಹಾಕಿದರು.

ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮಸ್ಟರಿಂಗ್ ಕಾರ್ಯ ಸುಗಮವಾಗಿ ನಡೆಯಿತು. ಕುಣಿಗಲ್ ಕ್ಷೇತ್ರ - ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜು, ರಾಜರಾಜೇಶ್ವರಿ ನಗರ ಕ್ಷೇತ್ರ - ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ, ಬೆಂಗಳೂರು ದಕ್ಷಿಣ ಕ್ಷೇತ್ರ - ಜಯನಗರದ ನ್ಯಾಷನಲ್ ಕಾಲೇಜು, ಆನೇಕಲ್ ಕ್ಷೇತ್ರ - ಚಂದಾಪುರ ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಾಲೆ, ಮಾಗಡಿ ಕ್ಷೇತ್ರ - ಮಾಗಡಿ ಎನ್ ಇಎಸ್ ಬಡಾವಣೆಯಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಮನಗರ ಕ್ಷೇತ್ರ - ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನಕಪುರ ಕ್ಷೇತ್ರ - ರೂರಲ್ ಪದವಿ ಪೂರ್ವ ಕಾಲೇಜು ಹಾಗೂ ಚನ್ನಪಟ್ಟಣ ಕ್ಷೇತ್ರ - ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ಜರುಗಿತು.

ಬೆಳಿಗ್ಗೆ 7ರಿಂದ ಪ್ರಾರಂಭಗೊಂಡ ಮಸ್ಟರಿಂಗ್ ಪ್ರಕ್ರಿಯೆ ಸಂಜೆವರೆಗೂ ನಡೆಯಿತು. ಮತಗಟ್ಟೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ/ಸಿಬ್ಬಂದಿಗೆ ಆಯಾಯ ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಸ್ಥಳದಲ್ಲಿ ತರಬೇತಿ ನೀಡಲಾಯಿತು.

ಬೆಳಗ್ಗೆ ಲಘು ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಮತದಾನಕ್ಕೆ ಅಗತ್ಯವಿರುವ ಚುನಾವಣಾ ಸಾಮಗ್ರಿಗಳನ್ನು ಮಸ್ಟರಿಂಗ್ ಸ್ಥಳದಲ್ಲೇ ವಿತರಿಸಲಾಯಿತು. ಇಲ್ಲಿಂದಲೇ ಚುನಾವಣೆ ಸಿಬ್ಬಂದಿಯನ್ನು ಮತಗಟ್ಟೆ ಕೇಂದ್ರಗಳಿಗೆ ನಿಯೋಜಿಸಿ ಕಳುಹಿಸಲಾಗುತ್ತಿತ್ತು.

ಮತಗಟ್ಟೆಗೆ ನಿಯೋಜಿತರಾಗಿರುವ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್‌, ವಿವಿ ಪ್ಯಾಟ್, ಮತದಾರರ ಪಟ್ಟಿ, ಶಾಹಿ ಸೇರಿದಂತೆ ಮತದಾನ ಕಾರ್ಯಕ್ಕೆ ಒದಗಿಸಲಾದ ಸಾಮಗ್ರಿ ಪಡೆದುಕೊಂಡು ವಾಹನಗಳಲ್ಲಿ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.

ಪ್ರತಿಯೊಂದು ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ ಹಾಗೂ ಮೂರು ಮತದಾನಾಧಿಕಾರಿಗಳು ಹಾಗೂ ಒಬ್ಬ ಡಿ ದರ್ಜೆ ನೌಕರರನ್ನು ನೇಮಕ ಮಾಡಲಾಗಿದೆ. 2829 ಮತಗಟ್ಟೆಗಳಿಗೆ ಪ್ರಿಸೈಡಿಂಗ್ ಅಧಿಕಾರಿಗಳು, ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳು, ಮತದಾನಾಧಿಕಾರಿಗಳನ್ನು ನಿಯೋಜಿಸಲಾಗಿದೆ.

ಮಸ್ಟರಿಂಗ್ ದಿನಾಂಕ ಮತಗಟ್ಟೆಗಳಿಗೆ ಸಿಬ್ಬಂದಿ ಮತ್ತು ಮತಗಟ್ಟೆ ಸಾಮಗ್ರಿಗಳನ್ನು ಸಾಗಿಸಲು ಬಸ್, ಮ್ಯಾಕ್ಸಿ ಕ್ಯಾಬ್ - ಮಿನಿಬಸ್, ಜೀಪುಗಳ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಸಿಬ್ಬಂದಿಗಳ ಉಪಯೋಗಕ್ಕಾಗಿ ತುರ್ತು ಚಿಕಿತ್ಸೆ (ಪ್ರಥಮ ಚಿಕಿತ್ಸೆ ಪೆಟ್ಟಿಗೆ) ಸಾಮಗ್ರಿಗಳನ್ನು ಪ್ರತಿ ಮತಗಟ್ಟೆಗೆ ಒದಗಿಸಲಾಗಿದೆ.

ಎಡಗೈ ತೋರು ಬೆರಳಿಗೆ ಶಾಹಿ:

ಭಾರತ ಚುನಾವಣಾ ಆಯೋಗದ ನಿರ್ದೇಶನದ ರೀತ್ಯಾ ಪ್ರಸ್ತುತ ಚುನಾವಣೆಯಲ್ಲಿ ಮತದಾರನ ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಚ್ಚಲಾಗುತ್ತದೆ.

ನಿಷೇಧಾಜ್ಞೆ ಜಾರಿ:

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಏ.24ರ ಸಂಜೆ 6 ಗಂಟೆಯಿಂದ ಏ. 26ರ ಮಧ್ಯರಾತ್ರಿ 12 ಗಂಟೆವರೆಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ ಕಲಂ 144 ರಡಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಬಾಕ್ಸ್‌.............

ಬಿಗಿ ಭದ್ರತೆಯಲ್ಲಿ ಡಿ ಮಸ್ಟರಿಂಗ್:

ಮತದಾನ ಮುಕ್ತಾಯದ ನಂತರ ಸೂಕ್ತವಾಗಿ ಸೀಲ್ ಮಾಡಿರುವ ಮತಯಂತ್ರಗಳನ್ನು ಮರಳಿ ಪಡೆಯುವ ಕಾರ್ಯ ಆಯಾಯ ವಿಧಾನಸಭಾ ಕ್ಷೇತ್ರಗಳ ಕೇಂದ್ರ ಸ್ಥಾನಗಳಲ್ಲಿ ನಿಗದಿಪಡಿಸಿದ ಡಿ - ಮಸ್ಟರಿಂಗ್ ಕೇಂದ್ರಗಳಲ್ಲಿ ನಡೆಯಲಿದೆ.

ಸೂಕ್ತ ಬಂದೋಬಸ್ತಿನೊಂದಿಗೆ ಕುಣಿಗಲ್ ಕ್ಷೇತ್ರ - ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜು, ರಾಜರಾಜೇಶ್ವರಿ ನಗರ ಕ್ಷೇತ್ರ - ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ , ಬೆಂಗಳೂರು ದಕ್ಷಿಣ ಕ್ಷೇತ್ರ - ಜಯನಗರದ ನ್ಯಾಷನಲ್ ಕಾಲೇಜು, ಆನೇಕಲ್ ಕ್ಷೇತ್ರ - ಚಂದಾಪುರ ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಾಲೆ, ಮಾಗಡಿ ಕ್ಷೇತ್ರ - ಮಾಗಡಿ ಎನ್ ಇಎಸ್ ಬಡಾವಣೆಯಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಮನಗರ ಕ್ಷೇತ್ರ - ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನಕಪುರ ಕ್ಷೇತ್ರ - ರೂರಲ್ ಪದವಿ ಪೂರ್ವ ಕಾಲೇಜು ಹಾಗೂ ಚನ್ನಪಟ್ಟಣ ಕ್ಷೇತ್ರ - ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ಸಾಗಿಸಲಾಗುತ್ತದೆ.

ಆನಂತರ ಮತಯಂತ್ರಗಳನ್ನು ರಾಮನಗರದ ಅರ್ಚಕರಹಳ್ಳಿಯಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಿಗದಿಪಡಿಸಿದ ಸ್ಟ್ರಾಂಗ್ ರೂಮ್‌ಗೆ ಸಾಗಿಸಿ ಸೀಲ್ ಮಾಡಲಾಗುತ್ತದೆ. ಮತ ಎಣಿಕೆ ದಿನಾಂಕದವರೆಗೆ ಸ್ಟ್ರಾಂಗ್ ರೂಮ್ ಕಟ್ಟಡವನ್ನು 24 ಗಂಟೆಗಳ ಕಾಲ ಸೂಕ್ತ ಭದ್ರತೆಯಲ್ಲಿ ಇಡಲು ಸೂಕ್ತ ಏರ್ಪಾಡು ಮಾಡಲಾಗುತ್ತದೆ.

25ಕೆಆರ್ ಎಂಎನ್ 2.ಜೆಪಿಜಿ

ವಿದ್ಯುನ್ಮಾನ ಮತಯಂತ್ರಗಳನ್ನು ಪಡೆದು ಮತಗಟ್ಟೆ ಕೇಂದ್ರಗಳತ್ತ ಹೊರಟ ಚುನಾವಣೆ ಸಿಬ್ಬಂದಿ.