ಸಾರಾಂಶ
ಕೃಷಿ ಇಲಾಖೆ ಸೇರಿದಂತೆ ೪೯ ವಿವಿಧ ಇಲಾಖೆಗಳಿಂದ ಒಟ್ಟು ೬೬ ಸ್ಥಾನಗಳಿಗೆ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಮಂಡ್ಯ ನಗರದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಆವರಣದ ಕಚೇರಿಯಲ್ಲಿ ನಾಮಪತ್ರ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಕಾರ್ಯ ಅ.೨೮ ರಿಂದ ನ.೭ರ ವರೆಗೂ ಇರಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಮತ ಕ್ಷೇತ್ರವಾರು ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಗಳಿಗೆ ನ.೧೬ ರಂದು ಚುನಾವಣೆ ನಡೆಯಲಿದೆ ಎಂದು ರೇಷ್ಮೆ ಇಲಾಖೆ ಅಧಿಕಾರಿ ಆದ ಚುನಾವಣಾಧಿಕಾರಿ ಕೆ.ಕೃಷ್ಣ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಆರ್.ಎಂ.ಚಂದ್ರಶೇಖರ ಮೂರ್ತಿ ತಿಳಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೃಷಿ ಇಲಾಖೆ ಸೇರಿದಂತೆ ೪೯ ವಿವಿಧ ಇಲಾಖೆಗಳಿಂದ ಒಟ್ಟು ೬೬ ಸ್ಥಾನಗಳಿಗೆ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ನಗರದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಆವರಣದ ಕಚೇರಿಯಲ್ಲಿ ನಾಮಪತ್ರ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಕಾರ್ಯ ಅ.೨೮ ರಿಂದ ನ.೭ರ ವರೆಗೂ ಇರಲಿದೆ. ನ.೮ ರಂದು ಬೆಳಗ್ಗೆ ೧೧ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಂದೇ ಅರ್ಹ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ನ.೧೧ರಂದು ಸಂಜೆ ೪.೩೦ ರೊಳಗಾಗಿ ನಾಮಪತ್ರ ವಾಪಸ್ ಪಡೆಯಬಹುದು. ನಂತರ ಸಂಜೆ ೫.೩೦ ಕ್ಕೆ ಅಂತಿಮವಾಗಿ ಕಣದಲ್ಲಿ ಉಳಿದವರ ಹೆಸರುಗಳನ್ನು ಪ್ರಕಟಿಸಲಾಗುವುದು. ನ.೧೬ ರಂದು ಬೆಳಗ್ಗೆ ೯ ರಿಂದ ಸಂಜೆ ೪ ರವರೆಗೆ ಚುನಾವಣೆ (ಮತದಾನ) ನಡೆಯಲಿದೆ. ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಹೇಳಿದ್ದಾರೆ.