ಪಟ್ಟಣ ವ್ಯಾಪಾರ ಸಮಿತಿಗೂ ಚುನಾವಣೆ ನಡೆಯುತ್ತಿಲ್ಲ!

| Published : May 25 2025, 01:25 AM IST

ಸಾರಾಂಶ

ಪ್ರತಿ 5 ವರ್ಷಕ್ಕೊಮ್ಮೆ ಈ ಸಮಿತಿಗೆ ಚುನಾವಣೆ ನಡೆಸಬೇಕು. ಬರೋಬ್ಬರಿ 25 ಜನ ಸದಸ್ಯರಿರುತ್ತಾರೆ. 25ರಲ್ಲಿ 10 ಜನರನ್ನು ಮತದಾರರೇ ಚುನಾವಣೆ ಮೂಲಕ ಆಯ್ಕೆ ಮಾಡಿದರೆ, ಐವರನ್ನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಜಿಪಂ, ತಾಪಂ ಚುನಾವಣೆ ನಡೆಯದೇ ಬರೋಬ್ಬರಿ 5 ವರ್ಷಕ್ಕೂ ಅಧಿಕ ಕಾಲವೇ ಗತಿಸಿದ ಬೆನ್ನಲ್ಲೇ ಇದೀಗ ಪಟ್ಟಣ ವ್ಯಾಪಾರ ಸಮಿತಿಯ (ಟೌನ್‌ ವೆಂಡಿಂಗ್‌ ಕಮಿಟಿ- ಟಿವಿಸಿ) ಚುನಾವಣೆಯನ್ನೂ ನಡೆಸುವ ಗೋಜಿಗೆ ಹೋಗುತ್ತಿಲ್ಲ ಸರ್ಕಾರ. ಅವಧಿ ಮುಗಿದು ಬರೋಬ್ಬರಿ 6 ತಿಂಗಳೇ ಕಳೆದರೂ ಈವರೆಗೂ ಘೋಷಣೆ ಮಾಡುತ್ತಿಲ್ಲ.

ಏನಿದು; ಯಾಕೆ?

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಈ ಸಮಿತಿಗಳಿರುತ್ತವೆ. ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿ ಬದಿ ವ್ಯಾಪಾರಸ್ಥರು ಇದಕ್ಕೆ ಮತದಾರರು. ಪ್ರತಿ 5 ವರ್ಷಕ್ಕೊಮ್ಮೆ ಈ ಸಮಿತಿಗೆ ಚುನಾವಣೆ ನಡೆಸಬೇಕು. ಬರೋಬ್ಬರಿ 25 ಜನ ಸದಸ್ಯರಿರುತ್ತಾರೆ. 25ರಲ್ಲಿ 10 ಜನರನ್ನು ಮತದಾರರೇ ಚುನಾವಣೆ ಮೂಲಕ ಆಯ್ಕೆ ಮಾಡಿದರೆ, ಐವರನ್ನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ. ಇನ್ನುಳಿದ 10 ಜನರಲ್ಲಿ ಆಯಾ ಸ್ಥಳೀಯ ಸಂಸ್ಥೆಯ ಅಧಿಕಾರಿ ವರ್ಗ ಇರುತ್ತದೆ. ಆಯುಕ್ತರು ಈ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ.

ಬೀದಿ ಬದಿಯ ವ್ಯಾಪಾರಸ್ಥರ ಪರವಾಗಿ ಈ ಸಮಿತಿಯೂ ಆ ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಬೀದಿ ಬದಿಯ ಯಾವುದೇ ಸಮಸ್ಯೆ ಇದ್ದರೂ ಈ ಸಮಿತಿಯೇ ಬಗೆಹರಿಸುತ್ತದೆ. ಒಂದೇ ಸಾಲಿನಲ್ಲಿ ಹೇಳಬೇಕೆಂದರೆ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಅಧಿಕಾರಿ ವರ್ಗ, ಆಡಳಿತ ಮಂಡಳಿಯ ನಡುವೆ ಸಂಪರ್ಕ ಸೇತುವೆಯಂತೆ ಇರುತ್ತದೆ.

ಏಕೆ ಮಾಡುತ್ತಿಲ್ಲ?

ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುತ್ತದೆ. ಕಳೆದ ಆರು ತಿಂಗಳ ಹಿಂದೆ ಅಂದರೆ 2024ರ ಡಿ. 22ಕ್ಕೆ ಈ ಸಮಿತಿಗಳ ಅವಧಿ ಮುಕ್ತಾಯಗೊಂಡಿದೆ. ಈ ಸಮಿತಿ ಅವಧಿ ಮುಕ್ತಾಯವಾಗುವ ಮುನ್ನವೇ ಮತ್ತೆ ಬೀದಿ ಬದಿ ವ್ಯಾಪಾರಸ್ಥರ ಮತದಾರರ ಸೇರ್ಪಡೆ ಅಂದರೆ ಸಮೀಕ್ಷೆ ನಡೆಸಿ ಚುನಾವಣೆ ನಡೆಸಬೇಕಿತ್ತು. ಆದರೆ ಮುಕ್ತಾಯಗೊಂಡು ಆರು ತಿಂಗಳಾದರೂ ಈವರೆಗೂ ಚುನಾವಣೆಯನ್ನೂ ಘೋಷಣೆ ಮಾಡುತ್ತಿಲ್ಲ. ಜತೆಗೆ ಬೀದಿ ಬದಿ ವ್ಯಾಪಾರಸ್ಥರ ಸಮೀಕ್ಷೆ ನಡೆಸುವಂತೆ ಯಾವುದೇ ಸ್ಥಳೀಯ ಸಂಸ್ಥೆಗಳಿಗೂ ತಿಳಿಸಿಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಚಟುವಟಿಕೆಗಳು ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುತ್ತಲೇ ಇಲ್ಲ. ಸರ್ಕಾರ ಸುತ್ತೊಲೆ ಹೊರಡಿಸಿಲ್ಲ. ಸರ್ಕಾರದಿಂದ ಆದೇಶ ಬಂದ ನಂತರ ಸಮೀಕ್ಷೆ ನಡೆಸುತ್ತೇವೆ. ಚುನಾವಣೆ ಆಗುವವರೆಗೂ ಆಯುಕ್ತರೇ ಸಮಿತಿಯನ್ನು ನಿರ್ವಹಿಸುತ್ತಾರೆ ಎಂದು ಅಧಿಕಾರಿ ವರ್ಗ ತಿಳಿಸುತ್ತದೆ.

ಆಕ್ರೋಶ:

ಈ ನಡುವೆ ಚುನಾವಣೆ ನಡೆಸದೇ ಇರುವುದಕ್ಕೆ ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಮಿತಿ ಇದ್ದರೆ ನಮ್ಮ ಸಮಸ್ಯೆಗಳನ್ನು ಅದರ ಮುಂದೆ ಹೇಳಿಕೊಳ್ಳಬಹುದು. ಆದರೆ ಸಮಿತಿ ಇಲ್ಲದೇ ಇದ್ದರೆ ಯಾರ ಮುಂದೆ ನಮ್ಮ ಕಷ್ಟ ಹೇಳಿಕೊಳ್ಳೋಣ. ಹೇಳಿದರೂ ಅದಕ್ಕೆ ಸ್ಪಂದನೆ ಸಿಗುವುದಿಲ್ಲ. ಬೇಗ ಚುನಾವಣೆ ನಡೆಸಿ ಎಂದು ಎಷ್ಟೇ ಸಲ ಹೇಳಿದರೂ ಈವರೆಗೂ ನಡೆಸುತ್ತಿಲ್ಲ. ಅದಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಇನ್ನಾದರೂ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವ್ಯಾಪಾರಸ್ಥರು ಎಚ್ಚರಿಕೆ ನೀಡುತ್ತಾರೆ.

ಒಟ್ಟಿನಲ್ಲಿ ಜಿಪಂ,ತಾಪಂನಂತೆ ಇದನ್ನು ಎಲ್ಲಿ ವರ್ಷಗಟ್ಟಲೇ ಚುನಾವಣೆ ನಡೆಸದೇ ಹಾಗೆ ಬಿಡುತ್ತದೆಯೋ? ಚುನಾವಣೆ ಘೋಷಣೆ ಮಾಡುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಸಮಿತಿಗೆ ಕಳೆದ ಬಾರಿ 6800 ಮತದಾರರಿದ್ದರು. ಈ ಸಲ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಸಮಿತಿ ಅವಧಿ ಡಿಸೆಂಬರ್‌ನಲ್ಲಿ ಮುಗಿದಿದೆ. ಇಷ್ಟರೊಳಗೆ ಚುನಾವಣೆ ನಡೆಸಬೇಕಿತ್ತು. ಆದರೆ ನಡೆಸಿಲ್ಲ. ಇನ್ನಾದರೂ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ವ್ಯಾಪಾರ ಸಮಿತಿ ಮಾಜಿ ಸದಸ್ಯ ಪ್ರೇಮನಾಥ ಚಿಕ್ಕತುಂಬಳ ತಿಳಿಸಿದ್ದಾರೆ.