ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ತಪ್ಪದೆ ಮತದಾನ ಮಾಡಿ

| Published : Apr 29 2024, 01:33 AM IST

ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ತಪ್ಪದೆ ಮತದಾನ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಇಲ್ಲಿಯ ಬಸವೇಶ್ವರನಗರದ ಭಾನುವಾರದ ಸಂತೆಯ ಬೀದಿಯಲ್ಲಿ ಗಲ್ಲಿ ಕ್ರಿಕೆಟ್ ಆಯೋಜಿಸುವುದರ ಮೂಲಕ ಮತದಾರರ ಗಮನ ಸೆಳೆಯಿತು.

ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಇಲ್ಲಿಯ ಬಸವೇಶ್ವರನಗರದ ಭಾನುವಾರದ ಸಂತೆಯ ಬೀದಿಯಲ್ಲಿ ಗಲ್ಲಿ ಕ್ರಿಕೆಟ್ ಆಯೋಜಿಸುವುದರ ಮೂಲಕ ಮತದಾರರ ಗಮನ ಸೆಳೆಯಿತು.ನಗರದ ೧೧ನೇ ವಾರ್ಡಿನ ಬಸವೇಶ್ವರನಗರ ಎ ಬ್ಲಾಕ್ ೭ನೇ ಅಡ್ಡ ರಸ್ತೆಯಲ್ಲಿ ಭಾನುವಾರದ ಸಂತೆ ನಡೆಯುವ ಬೀದಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ್ ಶ್ರೀಧರ್ ಅವರು ಬ್ಯಾಟ್ ಬೀಸುವುದರ ಮೂಲಕ ಗಲ್ಲಿ ಕ್ರಿಕೆಟ್‌ಗೆ ಚಾಲನೆ ನೀಡಿ ಮತದಾನದ ಮಹತ್ವ ಕುರಿತಂತೆ ಸಾರ್ವಜನಿಕರಿಗೆ ಸಂದೇಶ ನೀಡಿದರು. ಗಲ್ಲಿ ಕ್ರಿಕೆಟ್‌ನಲ್ಲಿ ಮಹಿಳಾ ತಂಡ ಸೇರಿದಂತೆ ಆರು ತಂಡಗಳು ಭಾಗವಹಿಸಿದ್ದು, ತಲಾ ಆರು ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಎಲ್‌ಇ ಶಾಲಾ ಮಕ್ಕಳ ತಂಡ ಪ್ರಥಮ ಸ್ಥಾನ ಹಾಗೂ ಸರ್.ಎಂ.ವಿ. ಶಾಲಾ ಮಕ್ಕಳ ತಂಡ ದ್ವಿತೀಯ ಸ್ಥಾನ ಪಡೆವು. ಅಧಿಕಾರಿಗಳ ತಂಡ, ಮಹಿಳೆಯರ ತಂಡ, ಸರ್.ಎಂ.ವಿ.ಶಾಲಾ ತಂಡ, ಕೆ.ಎಲ್.ಇ. ತಂಡ, ಸ್ಥಳೀಯ ಮಕ್ಕಳು ತಂಡಗಳು ಸೇರಿದಂತೆ ಆರು ತಂಡಗಳು ಗಲ್ಲಿ ಕ್ರಿಕೆಟ್‌ನಲ್ಲಿ ಭಾಗವಹಿಸಿ ರಂಜನೆಯ ಜೊತೆಗೆ ಸಾರ್ವಜನಿಕರಿಗೆ ಲೋಕಸಭಾ ಚುನಾವಣೆಯ ಮತದಾನದ ಮಹತ್ವ ಕುರಿತಂತೆ ಸಂದೇಶವನ್ನು ಸಾರಿದರು. ಸಂತೆಯಲ್ಲಿ ಮತದಾನ ಜಾಗೃತಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಅಕ್ಷಯ್ ಶ್ರೀಧರ್ ಅವರು ಸಂತೆಯಲ್ಲಿ ತರಕಾರಿ ವ್ಯಾಪಾರಸ್ಥರಿಗೆ, ಅಂಗಡಿಗಳ ಮಾಲೀಕರಿಗೆ ಹಾಗೂ ಮನೆ ಮನೆಗೆ ತೆರಳಿ ಮತದಾನ ಜಾಗೃತಿ ಕರಪತ್ರ ವಿತರಿಸುವ ಮೂಲಕ ಮೇ ೭ರಂದು ಸಮಯಾವಕಾಶ ಕಲ್ಪಿಸಿಕೊಂಡು ತಮ್ಮ ವ್ಯಾಪಾರ, ದೈನಂದಿನ ಕಾರ್ಯಗಳನ್ನು ಬದಿಗಿರಿಸಿ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ವಿನಂತಿಮಾಡಿಕೊಂಡು ಮತದಾನದ ಮಹತ್ವ ತಿಳಿಸುವ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿದರು.ಧ್ವಜಾರೋಹಣ: ನಮ್ಮ ನಡೆ ಮತಗಟ್ಟೆ ಕಡೆ ಎಂಬ ಧ್ಯೇಯದೊಂದಿಗೆ ಜಿಲ್ಲೆಯ ೧೪೮೨ ಮತಗಟ್ಟೆಗಳಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಧ್ವಜಾರೋಹಣ ನಡೆಸಿ, ಮತದಾನದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಕಳೆದ ಚುನಾಚಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕಳೆದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನದವಾದ ವಿದ್ಯಾನಗರ ಸಿ ಬ್ಲಾಕ್ ಹಾಗೂ ಬಸವೇಶ್ವರ ನಗರದ ಮತಗಟ್ಟೆ ವ್ಯಾಪ್ತಿಯಲ್ಲಿ ವಿಶೇಷ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದಕ್ಕೂ ಮುನ್ನ ವಿದ್ಯಾನಗರದ ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ಮತಗಟ್ಟೆ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ಅವರು ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಬೈಕ್, ರ‍್ಯಾಲಿ, ರಂಗೋಲಿ, ಚಿತ್ರಕಲೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನೀರ್ಭಿತಿಯಿಂದ ಮೇ ೭ ರಂದು ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ಎಂದು ಕರೆ ನೀಡಿದರು. ಜಿಲ್ಲೆಯ ೧೪೮೨ ಮತಗಟ್ಟೆಗಳಲ್ಲಿ ಭಾನುವಾರ ಏಕಕಾಲಕ್ಕೆ ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು. ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ೧೮ ವರ್ಷ ಪೂರೈಸಿದ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಲೆಕ್ಕಾಧಿಕಾರಿ ವಸಂತಕುಮಾರ, ಸಹಾಯಕ ಸಂಖ್ಯಿಕ ಅಧಿಕಾರಿ ಕುಮಾರ ಮಣ್ಣವಡ್ಡರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ನಿಡಗುಂದಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜಾನಾಯ್ಕ, ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ್, ಹಾವೇರಿ ಪೊಲೀಸ್ ಠಾಣೆ ಪಿಎಸ್‌ಐ ಮೋತಿಲಾಲ್ ಪವಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.