ಚುನಾವಣೆ: ಮದ್ಯ ನಿಷೇಧ ಡೀಸಿ ಆದೇಶ ಅಬಾಧಿತ; ನಾಳೆ ರಾತ್ರಿವರೆಗೆ ಮದ್ಯ ನಿಷೇಧ

| Published : Feb 16 2024, 01:47 AM IST

ಚುನಾವಣೆ: ಮದ್ಯ ನಿಷೇಧ ಡೀಸಿ ಆದೇಶ ಅಬಾಧಿತ; ನಾಳೆ ರಾತ್ರಿವರೆಗೆ ಮದ್ಯ ನಿಷೇಧ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯ ಮಾರಾಟ ನಿಷೇಧವನ್ನು ಮತದಾನ (ಫೆ.16) ಹಾಗೂ ಮತ ಎಣಿಕೆ ದಿನದಂದು (ಫೆ.20) ಸೀಮಿತಗೊಳಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಗುರುವಾರ ತಡೆಯಾಜ್ಞೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯ ಮಾರಾಟ ನಿಷೇಧವನ್ನು ಮತದಾನ (ಫೆ.16) ಹಾಗೂ ಮತ ಎಣಿಕೆ ದಿನದಂದು (ಫೆ.20) ಸೀಮಿತಗೊಳಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಗುರುವಾರ ತಡೆಯಾಜ್ಞೆ ನೀಡಿದೆ.

ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಅಲ್ಲದೆ, ಮತದಾನದ ದಿನದ ಹಿಂದಿನ 48 ಗಂಟೆ ಹಾಗೂ ಮತ ಎಣಿಕೆ ದಿನದಂದು ಆಹಾರ ಪೂರೈಸಲು ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ವಿಭಾಗೀಯ ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ. ಇದರಿಂದ ಜಿಲ್ಲಾಧಿಕಾರಿಯ ಈ ಹಿಂದಿನ ಆದೇಶದಂತೆ ಫೆ.14ರ ಸಂಜೆ 5ರಿಂದ ಮತದಾನದ ದಿನವಾದ ಫೆ.16ರ ಮಧ್ಯರಾತ್ರಿ 12ರವರೆಗೆ ಮತ್ತು ಮತದಾನ ಮತ ಎಣಿಕೆ ದಿನವಾದ ಫೆ.20ರಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12ರವರೆಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಇರಲಿದೆ.

ಮೇಲ್ಮನವಿಯ ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ವಾದ ಮಂಡಿಸಿ, ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 135(ಸಿ) ಪ್ರಕಾರ ಯಾವುದೇ ಚುನಾವಣೆ ಘೋಷಣೆಯಾದರೂ ಮತದಾನದ ದಿನಕ್ಕೂ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಲು ಅವಕಾಶವಿದೆ. ಅದರಂತೆ ಸರ್ಕಾರ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿದೆ. ಜಿಲ್ಲಾಧಿಕಾರಿಗಳ ಆದೇಶದಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ. ಏಕ ಸದಸ್ಯ ಪೀಠ ಮದ್ಯ ಮಾರಾಟವನ್ನು ಮತದಾನದ ದಿನಕ್ಕೆ ಸೀಮಿತಗೊಳಿಸಿರುವುದು ಪ್ರಜಾಪ್ರತಿನಿಧಿ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ ಈ ಆದೇಶಕ್ಕೆ ತಡೆ ನೀಡುವಂತೆ ಕೋರಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತು.

++++ಪ್ರಕರಣದ ವಿವರ

ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಫೆ.14ರಂದು ಸಂಜೆ 5ರಿಂದ ಮತದಾನ ನಡೆಯುವ ಫೆ.16ರ ಮಧ್ಯರಾತ್ರಿ 12ರವರೆಗೆ ಮತ್ತು ಮತ ಎಣಿಕೆ ದಿನವಾದ ಫೆ.20ರಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ನಗರದ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.

ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಅವರ ಏಕ ಸದಸ್ಯ ಪೀಠ, ಮತದಾನದ ದಿನವಾದ ಫೆ.16 ಮತ್ತು ಮತ ಎಣಿಕೆ ದಿನವಾದ ಫೆ.20ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಮಾತ್ರ ನಗರದಲ್ಲಿ ಮದ್ಯ ಮಾರಾಟ‌ಕ್ಕೆ ನಿಷೇಧವನ್ನು ಸೀಮಿತಗೊಳಿಸಿ ಮಧ್ಯಂತರ ಆದೇಶ ಮಾಡಿತ್ತು.