ಇಂದು ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. ಅದರಲ್ಲಿ ಸುಧಾರಣೆ ತರುವುದೇ ನಾವು ವೀರಣ್ಣನವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು
ಇಂದು ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. ಅದರಲ್ಲಿ ಸುಧಾರಣೆ ತರುವುದೇ ನಾವು ವೀರಣ್ಣನವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ವೀರಣ್ಣ ಅಭಿಮಾನಿ ಬಳಗ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿದ್ದ ವೀರಣ್ಣ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಚುನಾವಣೆ ವ್ಯವಸ್ಥೆ ಬಹಳ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಅಭಿಪ್ರಾಯ ನನ್ನದು. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ವ್ಯವಸ್ಥೆ ಸುಧಾರಣೆ ಯಾಗದೆ ನಾನು ಪ್ರಾಮಾಣಿಕ ಎಂದರೆ ಆತ್ಮ ವಂಚನೆಯಾಗುತ್ತದೆ ಎಂದರು.
ವೀರಣ್ಣ ನವರ ಪ್ರಾಮಾಣಿಕತೆ, ಬದ್ದತೆ, ಸರಳತೆ ಅಳವಡಿಸಿಕೊಳ್ಳುವುದು ಇಂದಿನ ರಾಜಕಾರಣಕ್ಕೆ ಕಷ್ಟ.ಹಾಗಾಗಿ ಚುನಾವಣಾ ವ್ಯವಸ್ಥೆ ಸುಧಾರಣೆಗೆ ಜನರು ಹೋರಾಟ ನಡೆಸಬೇಕಿದೆ. 1983ರಲ್ಲಿ ನಾನು ವೀರಣ್ಣ ಸ್ನೇಹಿತರು, ವಿಧಾನಸಭೆಗೆ ತಪ್ಪಿಸಿಕೊಂಡವರಲ್ಲ. ಜನರ ಸಮಸ್ಯೆಗಳನ್ನು ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡ ಸೇರಿದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಕಷ್ಟು ಅನುಕೂಲವಾಯಿತು. ಯಾವುದೇ ಖಾತೆ ನೀಡಿದರೂ ದಕ್ಷತೆಯಿಂದ ಕೆಲಸ ಮಾಡಿ, ಹೆಸರು ಮಾಡಿದರು. ವೀರಣ್ಣ ನವರನ್ನು ವಾಲ್ಮೀಕಿ ಸಮುದಾಯ ಮರೆಯುವಂತಿಲ್ಲ. ಅವರ ಆತ್ಮಕ್ಕೆ ಶಾಂತಿ ನೀಡುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಸಿದ್ದರಾಮಯ್ಯ ನುಡಿದರು.ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಇಂದಿನ ಕಲುಷಿತ ರಾಜಕಾರಣದಲ್ಲಿ ವೀರಣ್ಣನವರಂತಹ ವ್ಯಕ್ತಿತ್ವ ವಿರಳ. ಹಣವೇ ಎಲ್ಲವನ್ನು ನಿರ್ಧರಿಸುವ ಕಾಲದಲ್ಲಿ, ವೀರಣ್ಣನವರ ರಾಜಿಯಾಗದ ಮನಸ್ಥಿತಿ ನಿಜಕ್ಕೂ ಶ್ಲಾಘನೀಯ. 2008ರ ಕೊರಟಗೆರೆ ಚುನಾವಣೆಯಲ್ಲಿ ಸಹಾಯ ಮಾಡಿದ್ದರು. ಅವರನ್ನು ಕಳೆದುಕೊಂಡು ತುಂಬಾ ನೋವಾಗಿದೆ. ಯುವಜನರಲ್ಲಿ ಸಾಕಷ್ಟು ಬದಲಾಗಿದ್ದಾರೆ. ನಮ್ಮ ಭವಿಷ್ಯವೇನು ಎಂಬ ಆತಂಕದಲ್ಲಿದ್ದಾರೆ. ಅವಕಾಶ ವಂಚಿತರಾಗುತ್ತಿದ್ದಾರೆ. ಬಡವ-ಶ್ರೀಮಂತರ ನಡುವಿನ ಅಂತರ ಹೆಚ್ಚಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ನಮಗೆಲ್ಲರಿಗೂ ವೀರಣ್ಣ ಅವರ ನಡೆ ಮಾದರಿ. ತುಮಕೂರು ಜಿಲ್ಲೆಯಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮಾಜಿ ಸಂಸದ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆ ರಾಜ್ಯಾಧ್ಯಕ್ಷ ವಿ.ಎಸ್. ಉಗ್ರಪ್ಪ ಮಾತನಾಡಿ, ನನ್ನ ಬದುಕಿನ ಆದರ್ಶ ವ್ಯಕ್ತಿ ವೀರಣ್ಣ. ವಾರದ ಅನ್ನದ ವಿದ್ಯಾರ್ಥಿಯಾಗಿದ್ದ ನನಗೆ ಸೋಮವಾರದ ಊಟ ನೀಡಿದ್ದು ವೀರಣ್ಣ ಕುಟುಂಬ. ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೂ ಅದರ ಆಶಯ ಈಡೇರಿಲ್ಲ ಎಂಬ ಆತಂಕವಿತ್ತು. ಸಂವಿಧಾನದ 9ನೇ ಷಡ್ಯೂಲ್ ಗೆ ಸೇರಿಸಿದರೆ ವೀರಣ್ಣ ಅವರ ಆತ್ಮಕ್ಕೆ ನಿಜವಾಗಿಯೂ ಶಾಂತಿ ದೊರೆಯಲಿದೆ. ಇದಕ್ಕೆ ಎಲ್ಲ ನಾಯಕರು ಮನಸ್ಸು ಮಾಡಬೇಕು ಎಂದರು.ಪಕ್ಷನಿಷ್ಠೆಗೆ ಮತ್ತೊಂದು ಹೆಸರು ವೀರಣ್ಣ ಪಕ್ಷ ಬದಲಿಸಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು. ಹಣ ಹಂಚಿ ಶಾಸಕರಾದವರಲ್ಲ. ಸರ್ಕಾರವೇ ಚುನಾವಣಾ ವೆಚ್ಚ ಭರಿಸುವ ಕೆಲಸ ಆಗಬೇಕು. ಒನ್ ನೇಶನ್ ,ಒನ್ ಎಲೆಕ್ಷನ್, ಮಹಿಳಾ ಮೀಸಲಾತಿ ಮಾತುಗಳ ನಡುವೆ, ಸ್ಟೇಟ್ಸ್ ಫಂಡ್ ನಲ್ಲಿ ಚುನಾವಣೆ ನಡೆಯಬೇಕು. ಪ್ರಾಮಾಣಿಕರು ರಾಜಕಾರಣಕ್ಕೆ ಬರಬೇಕು ಎಂದು ವಿ.ಎಸ್. ಉಗ್ರಪ್ಪ ತಿಳಿಸಿದರು.
ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿದರು. ಬಿಟ್ಟಿ ಭಾಗ್ಯ ಅಣಕಿಸುವವರು ಬಡವರ ವಿರೋಧಿಗಳು, ದಕ್ಷತೆ, ಪ್ರಾಮಾಣಿಕತೆ,ಪಾರದರ್ಶಕತೆ, ನೈತಿಕತೆ, ಸರಳತೆ ಎಂಬ ಗ್ಯಾರಂಟಿಗಳನ್ಬು ರಾಜಕೀಯ ನಾಯಕರು ಅಳವಡಿಸಿಕೊಂಡರೆ ರಾಜ್ಯ ಸುಭೀಕ್ಷವಾಗಲಿದೆ ಎಂದರು.ಶಾಸಕರಾದ ಟಿ.ಬಿ.ಜಯಂದ್ರ, ಕೆ.ಎನ್.ರಾಜಣ್ಣ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಮಾತನಾಡಿದರು. ಎಚ್.ಸಿ.ಹನುಮಂತಯ್ಯ, ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದಶ್ರೀನಿವಾಸ್, ಅಶೋಕ ಪಟ್ಟಣಶೆಟ್ಟಿ, ಡಾ.ಎಂ.ಆರ್.ಹುಲಿನಾಯ್ಕರ್, ಪತ್ರಕರ್ತರಾದ ಎಸ್.ನಾಗಣ್ಣ, ವಿ.ಎನ್.ಮೂರ್ತಿ, ನರಸಿಂಹಯ್ಯ, ಎಚ್.ಸಿ.ಹನುಮಂತಯ್ಯ, ಹಿರಿಯರು ಉಪಸ್ಥಿತರಿದ್ದರು.
