ಸಾರಾಂಶ
ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೊಲೆಟ್ ಕಂಪನಿಯು ತಯಾರಿಸುವ ವಿದ್ಯುತ್ ಚಾಲಿತ ಮೋಟಾರು ಸೈಕಲ್‌ಗಳು ಯೂರೋಪ್‌ಗೆ ರಫ್ತು ಆಗಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೊಲೆಟ್ ಕಂಪನಿಯು ತಯಾರಿಸುವ ವಿದ್ಯುತ್ ಚಾಲಿತ ಮೋಟಾರು ಸೈಕಲ್ಲುಗಳನ್ನು ಯೂರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಕಾರ್ಯಕ್ರಮಕ್ಕೆ ಕೇಂದ್ರದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.ಮುಂದುವರಿದ ರಾಷ್ಟ್ರಗಳಿಗೆ ಎಫ್77-ಸ್ಪೋರ್ಟ್ಸ್ ಸ್ತರದ ಇ-ಮೋಟಾರ್ ಸೈಕಲ್ಲುಗಳ ರಫ್ತು ಭಾರತದಿಂದ ಇದೇ ಮೊಟ್ಟಮೊದಲ ವಿಕ್ರಮವಾಗಿದೆ. ಅಲ್ಟ್ರಾವಯೊಲೆಟ್ ತಯಾರಿತ ಮೋಟಾರ್ ಸೈಕಲ್ಲುಗಳನ್ನು ಯೂರೋಪ್ ಖಂಡದ ಜರ್ಮನಿ, ಇಟಲಿ, ಟರ್ಕಿ ಮತ್ತು ಸ್ಪೇನ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಈ ವಾಹನಗಳನ್ನು ಜಿಗಣಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ.
ಅಲ್ಟ್ರಾವಯೊಲೆಟ್ ಕಂಪನಿಯ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ನೀರಜ್ ರಾಜಮೋಹನ್, ಸಹಾಯಕ ಉಪಾಧ್ಯಕ್ಷ ಧೀರಜ್ ಶೆಟ್ಟಿ ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ. ಈ ಮೋಟಾರ್ ಸೈಕಲ್ಲುಗಳ ಬೆಲೆ ₹2.99 ಲಕ್ಷಗಳಾಗಿದ್ದು, ಈಗಾಗಲೇ ಸ್ಥಳೀಯವಾಗಿಯೂ ಲಭ್ಯವಿದೆ. ಒಂದು ಸಲ ಚಾರ್ಜ್ ಮಾಡಿದರೆ 323 ಕಿ.ಮೀ. ದೂರ ಕ್ರಮಿಸಬಹುದಾಗಿದೆ. ಜತೆಗೆ ಯುಎನ್ 38.3 ದರ್ಜೆಯ ಉತ್ಕೃಷ್ಟ ಬ್ಯಾಟರಿ ಇದರಲ್ಲಿ ಇರಲಿದ್ದು, ಇದು ಎ1 ಕ್ಯಾಟಗರಿಗೆ ಸೇರಿದೆ. ಈ ಮೋಟಾರ್ ಸೈಕಲ್ಲುಗಳ ರಫ್ತು ವಹಿವಾಟಿನಿಂದ ರಾಜ್ಯ ಮತ್ತು ದೇಶದ ಆರ್ಥಿಕತೆಗೆ ಬಲ ಬರಲಿದೆ.