ಗಾಳಿ ಮಳೆ ಆರ್ಭಟಕ್ಕೆ ವಿದ್ಯುತ್ ಕಂಬಗಳು ಧರೆಗೆ

| Published : Jul 26 2025, 12:00 AM IST

ಗಾಳಿ ಮಳೆ ಆರ್ಭಟಕ್ಕೆ ವಿದ್ಯುತ್ ಕಂಬಗಳು ಧರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿತಾಲೂಕಿನಾದ್ಯಂತ ಮಳೆ ಗುರುವಾರ ರಾತ್ರಿಯಿಂದ ಜೋರಾದ ಗಾಳಿ ಸಹಿತ ಎಡಬಿಡದೆ ಸತತವಾಗಿ ಸುರಿಯುತ್ತಿದೆ. ಶೃಂಗೇರಿ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸ್ಥಗಿತಗೊಂಡಿದ್ದ ವಿದ್ಯುತ್ ಶುಕ್ರವಾರ ಸಂಜೆಯವರೆಗೂ ಇರಲಿಲ್ಲ.

ವಿದ್ಯುತ್ ಸಂಪರ್ಕ ಸ್ಥಗಿತ: ಅಗತ್ಯ ಕೆಲಸ ಕಾರ್ಯಗಳಿಗೆ ಜನರ ಪರದಾಟ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಮಳೆ ಗುರುವಾರ ರಾತ್ರಿಯಿಂದ ಜೋರಾದ ಗಾಳಿ ಸಹಿತ ಎಡಬಿಡದೆ ಸತತವಾಗಿ ಸುರಿಯುತ್ತಿದೆ. ಶೃಂಗೇರಿ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸ್ಥಗಿತಗೊಂಡಿದ್ದ ವಿದ್ಯುತ್ ಶುಕ್ರವಾರ ಸಂಜೆಯವರೆಗೂ ಇರಲಿಲ್ಲ.

ಕಿಗ್ಗಾ ಬಳಿ ಗಾಳಿಗೆ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ಲೈನ್ ಅವ್ಯವಸ್ಥೆಯಿಂದ ಜನ ಪರಿತಪಿಸುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿ ಬೀಳುತ್ತಿವೆ. ಮಳೆಯ ರಭಸಕ್ಕೆ ಆನೆಗುಂದ, ನೆಮ್ಮಾರು, ತ್ಯಾವಣ ರಾ.ಹೆ 169 ರ ರಸ್ತೆ ಬಳಿ ಗುಡ್ಡ ಕುಸಿದು ಮಣ್ಣು ರಸ್ತೆಯ ಮೇಲೆ ಬೀಳುತ್ತಿದೆ.

ಶುಕ್ರವಾರ ಬೆಳಿಗ್ಗೆಯಿಂದಲೂ ಭಾರಿ ಮಳೆ ಸುರಿಯುತ್ತಿದ್ದರಿಂದ ತುಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳೆಲ್ಲ ಮತ್ತೆ ಜಲಾವೃತಗೊಂಡಿದೆ. ಸಿರಿಮನೆ, ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ನಂದಿನಿ, ನಳಿನಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶುಕ್ರವಾರ ಮಳೆ ಜೊತೆ ಭಾರೀ ಗಾಳಿಯು ಬೀಸುತ್ತಿದೆ.

ಶಾಲೆಗಳಿಗೆ,ಅಂಗನವಾಡಿಗೆ ರಜೆ ನೀಡಿರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳದ ನೀರು ಉಕ್ಕಿ ಹರಿಯುತ್ತಿದೆ. ಕಳೆದೆರೆಡು ದಿನಗಳಿಂದ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿರುವುದರಿಂದ ಕುಡಿಯುವ ನೀರು ಸೇರಿದಂತೆ ಅಗತ್ಯ ಕೆಲಸ ಕಾರ್ಯಗಳಿಗೆ ಜನರು ಪರದಾಡುವಂತಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಸಂಜೆಯವರೆಗೂ ಗಾಳಿ ಮಳೆಯ ಆರ್ಭಟ ಮುಂದುವರಿದಿತ್ತು.

ಮಳೆ: ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ.

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಶುಕ್ರವಾರ ಮಳೆ ಚುರುಕುಗೊಂಡಿದ್ದು, ಮಲೆನಾಡಿನ ಹಲವೆಡೆ ನಿರಂತರವಾಗಿ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆರು ತಾಲೂಕುಗಳ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.ಚಿಕ್ಕಮಗಳೂರು ತಾಲೂಕಿನ ಆವತಿ, ಜಾಗರ, ವಸ್ತಾರೆ, ಆಲ್ದೂರು, ಖಾಂಡ್ಯ ಹೋಬಳಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸೇರಿದಂತೆ ಜಿಲ್ಲೆಯ ಇತರ ತಾಲೂಕುಗಳಾದ ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಬರುತ್ತಿರುವುದರಿಂದ ಬಲವಾಗಿ ಥಂಡಿ ಗಾಳಿ ಬೀಸುತ್ತಿದೆ. ವಯೋ ವೃದ್ಧರು ಮನೆಗಳಿಂದ ಹೊರಗೆ ಹೋಗಲಾರದ ಸ್ಥಿತಿ ನಿರ್ಮಾಣಗೊಂಡಿದೆ.

25 ಶ್ರೀ ಚಿತ್ರ 2-

ಶೃಂಗೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದು.