ಸಾರಾಂಶ
ತಿಪಟೂರು: ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ರೈತ ಸೇರಿದಂತೆ ಎರಡು ಸೀಮೆ ಹಸುಗಳು ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಕಲ್ಲಯ್ಯನಪಾಳ್ಯದಲ್ಲಿ ಮಂಗಳವಾರ ನಡೆದಿದೆ. ಕಲ್ಲಯ್ಯನಪಾಳ್ಯದ ವಾಸಿ ಯೋಗೇಶ್ (55) ಮೃತಪಟ್ಟ ದುರ್ದೈವಿ. ಎಂದಿನಂತೆ ಹಸುಗಳ ಹಾಲು ಕರೆದು ಮೇಯಿಸಲು ತಮ್ಮ ಜಮೀನಿಗೆ ಹೋಗಿದ್ದಾಗ ರಾತ್ರಿ ಮಳೆ ಗಾಳಿಯಿಂದ ತುಂಡಾಗಿ ಬಿದ್ದು ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಗಮನಿಸದ ರೈತ ಯೋಗೇಶ್ ಹಾಗೂ ಎರಡು ಹಸುಗಳು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಸೀಮೆ ಹಸುಗಳು ಎರಡು ಲಕ್ಷರೂ ಬೆಲೆವುಳ್ಳವಾಗಿದ್ದು ಹೈನುಗಾರಿಕೆಯಿಂದ ಇವರ ಕುಟುಂಬ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ನಾಗರಾಜು, ನೊಣವಿನಕೆರೆ ಠಾಣೆ ಇನ್ಸ್‌ಪೆಕ್ಟರ್ ಬಸವರಾಜು ಕವಟಗಿ, ಬೆಸ್ಕಾಂ ಇಲಾಖೆ ಎಇಇ ಮನೋಹರ್ ಸೇರಿದಂತೆ ಕಂದಾಯ ಇಲಾಖೆ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ವಿರುದ್ದ ಪ್ರಕರಣ ದಾಖಲಾಗಿದೆ.