ವಿದ್ಯುತ್‌ ಶಾಕ್‌; ಆಲತ್ತೂರು ಬಳಿ ಸಲಗ ಬಲಿ!

| Published : Apr 09 2025, 12:35 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ರಾಜೇಶ್‌ಗೆ ಸೇರಿದ ಜಮೀನಿನಲ್ಲಿ ವಿದ್ಯುತ್‌ ತಗುಲಿ ಆನೆ ಸಾವನ್ನಪ್ಪಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ವಿದ್ಯುತ್‌ ತಗುಲಿ ಆನೆಯೊಂದು ಸಾವನ್ನಪ್ಪಿದ ಘಟನೆ ತಾಲೂಕಿನ ಆಲತ್ತೂರು ಗ್ರಾಮದ ಬಳಿ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಅರಣ್ಯ ವ್ಯಾಪ್ತಿಗೆ ಬರುವ ಆಲತ್ತೂರು ಗ್ರಾಮದ ರಾಜೇಶ್‌ಗೆ ಸೇರಿದ ಸ.ನಂ.೧೫೫ರ ಜಮೀನಿನಲ್ಲಿ ಸುಮಾರು ೪೦ವರ್ಷದ ಸಲಗದ ದೇಹ ಪತ್ತೆಯಾಗಿದೆ. ವಿಷಯ ತಿಳಿದ ಓಂಕಾರ ವಲಯದ ಅರಣ್ಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಬಳಿಕ ಎಸಿಎಫ್‌, ಆರ್‌ಎಫ್‌ಒಗೆ ವಿಷಯ ಮುಟ್ಟಿಸಿದ ಬಳಿಕ ಸ್ಥಳಕ್ಕಾಗಮಿಸಿದ ಎಸಿಎಫ್‌ ಸುರೇಶ್‌ ಸಾವನ್ನಪ್ಪಿದ ಆನೆ ಪರಿಶೀಲನೆ ನಡೆಸಿದರು.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರ್‌ ಅವರ ಗಮನಕ್ಕೆ ತಂದು ಪಶು ವೈದ್ಯ ಡಾ.ವಾಸೀಂ ಮಿರ್ಜಾ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ರೈತ ರಾಜೇಶ್‌ ತಮ್ಮ ಜಮೀನಿನ ಬೆಳೆ ರಕ್ಷಣೆಗೆ ಹಾಕಲಾಗಿದ್ದ ವಿದ್ಯುತ್‌ ತಂತಿ ತುಳಿದು ಆನೆ ಸಾವನ್ನಪ್ಪಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಸಿಎಫ್‌ ಸುರೇಶ್‌ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರ್‌ ಭೇಟಿ ನೀಡಿದ್ದರು. ಬೇಗೂರು ಸೆಸ್ಕಾಂ ಎಇಇ, ಬೇಗೂರು ಪೊಲೀಸ್‌ ಸಿಬ್ಬಂದಿ ಇದ್ದರು. ಬೆಳೆ ರಕ್ಷಣೆಗೆ ರೈತ ರಾಜೇಶ್‌ ಜಮೀನಿಗೆ ಹಾಕಿದ್ದ ವಿದ್ಯುತ್‌ ತಂತಿ ಅಕ್ರಮವಾಗಿ ಹಾಕಿದ್ದಾರೆಂಬ ದೂರಿನ ಮೇರೆಗೆ ಬೇಗೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ರೈತ ರಾಜೇಶ್‌ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆಲತ್ತೂರು ಜಯರಾಂ ಆಕ್ರೋಶ:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದ ಆಲತ್ತೂರು, ಮಂಚಹಳ್ಳಿ ಸುತ್ತ ಕಾಡಾನೆಗಳ ಹಾವಳಿಗೆ ಅರಣ್ಯ ಇಲಾಖೆ ಬ್ರೇಕ್‌ ಹಾಕಿದ್ದರೆ ಆನೆ ವಿದ್ಯುತ್‌ಗೆ ಬಲಿಯಾಗುತ್ತಿರಲಿಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ, ಟಿಎಪಿಸಿಎಂಎಸ್‌ ಅಧ್ಯಕ್ಷ ಆಲತ್ತೂರು ಜಯರಾಂ ಹೇಳಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿ, ಆಲತ್ತೂರು, ಮಂಚಹಳ್ಳಿ ಸುತ್ತ ಕಾಡಾನೆಗಳು ದಿನಂ ಪ್ರತಿ ದಾಳಿ ಮಾಡುತ್ತಿವೆ. ರೈತರು ಸಾಲ ಮಾಡಿ ಬೆಳೆದ ಬೆಳೆ ಹಾಳಾಗುತ್ತಿವೆ ಎಂದು ಅರಣ್ಯ ಇಲಾಖೆಗೆ ರೈತರು ದೂರು ನೀಡಿದ್ದರೂ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಯಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

ರೈತರ ಬೆಳೆ ಕೈ ಸೇರುತ್ತಿಲ್ಲ:

ಸಾಲಗಾರರಾದ ರೈತರು ಜೀವನ ನಡೆಸಲು ಕಷ್ಟವಾಗಿದೆ. ಬೆಳೆದ ಫಸಲು ಉಳಿಸಿಕೊಳ್ಳಲು ವಿದ್ಯುತ್‌ ಹಾಯಿಸಿದ್ದಾನೆಯೇ ಹೊರತು ಆನೆ ಸಾಯಿಸಲು ಅಲ್ಲ; ಅರಣ್ಯ ಇಲಾಖೆ ರೈತರ ಕಷ್ಟ, ನೋವು ಅರ್ಥ ಮಾಡಿಕೊಂಡು ಕಾಡಾನೆಗಳ ಹಾವಳಿ ತಡೆಗಟ್ಟಲು ಮುಂದಾಗಬೇಕು ಎಂದಿದ್ದಾರೆ. ಓಂಕಾರ ವಲಯದಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್‌ ಹಾಕಬೇಕು, ಆನೆ ಹಾವಳಿಗೆ ಶಾಶ್ವತ ಪರಿಹಾರಯೊಂದೇ ದಾರಿ ಎಂದಿದ್ದಾರೆ.