ಎಲೆಕ್ಟ್ರಿಕ್‌ ವಾಹನದ ಬ್ಯಾಟರಿ ದುಸ್ಥಿತಿ: ಕಂಪನಿಗೆ ದಂಡ

| Published : Jul 30 2025, 12:46 AM IST

ಎಲೆಕ್ಟ್ರಿಕ್‌ ವಾಹನದ ಬ್ಯಾಟರಿ ದುಸ್ಥಿತಿ: ಕಂಪನಿಗೆ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ ಗೋಕುಲ ರಸ್ತೆಯ ನಿವಾಸಿ ರೋಹಿತ್‌ ಜೋಶಿ ಎನ್ನುವವರು 2021ರಲ್ಲಿ ₹91 ಸಾವಿರ ಕೊಟ್ಟು ಟ್ರೈಯೋ ಗ್ರೂಪ್ಸ್‌ ಫ್ಯೂವರ್‌ ಎನರ್ಜಿ ಕಂಪನಿಯಿಂದ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದ್ದರು. ಬ್ಯಾಟರಿಯೂ 36 ತಿಂಗಳು, ವಾಹನದ ಬಿಡಿ ಭಾಗಗಳ ಮೇಲೆ ಒಂದು ವರ್ಷದ ವಾರಂಟಿ ಇತ್ತು. ಆದರೆ, ಕೆಲವೇ ದಿನಗಳಲ್ಲಿ ಬ್ಯಾಟರಿ ಪೂರ್ಣ ಖಾಲಿಯಾಗಿ ರಸ್ತೆ ಮಧ್ಯೆ ನಿಲ್ಲಲು ಪ್ರಾರಂಭಿಸಿತು.

ಧಾರವಾಡ: ಎಲೆಕ್ಟ್ರಿಕ್‌ ದ್ವಿಚಕ್ರವಾಹನ ಖರೀದಿಸಿದ್ದ ಗ್ರಾಹಕರಿಗೆ ಸರಿಯಾದ ಬ್ಯಾಟರಿ ನೀಡದ ಟ್ರೈಯೋ ಗ್ರೂಪ್ಸ್‌ ಫ್ಯೂವರ್‌ ಎನರ್ಜಿ ಪ್ರೈ.ಲಿ.ಗೆ ದಂಡ ವಿಧಿಸಿದೆ. ಅಲ್ಲದೇ ಹೊಸ ಬ್ಯಾಟರಿ ಅಳವಡಿಸಿಕೊಡಬೇಕು ಎಂದು ಸೂಚನೆ ನೀಡಿದೆ. ಬ್ಯಾಟರಿ ಅಳವಡಿಸಿಕೊಡದಿದ್ದಲ್ಲಿ ಪಾವತಿಸಿದ ದುಡ್ಡನ್ನು ವಾಪಸ್‌ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವೇದಿಕೆಯೂ ತೀರ್ಪು ನೀಡಿ ಆದೇಶಿಸಿದೆ.

ಹುಬ್ಬಳ್ಳಿ ಗೋಕುಲ ರಸ್ತೆಯ ನಿವಾಸಿ ರೋಹಿತ್‌ ಜೋಶಿ ಎನ್ನುವವರು 2021ರಲ್ಲಿ ₹91 ಸಾವಿರ ಕೊಟ್ಟು ಟ್ರೈಯೋ ಗ್ರೂಪ್ಸ್‌ ಫ್ಯೂವರ್‌ ಎನರ್ಜಿ ಕಂಪನಿಯಿಂದ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದ್ದರು. ಬ್ಯಾಟರಿಯೂ 36 ತಿಂಗಳು, ವಾಹನದ ಬಿಡಿ ಭಾಗಗಳ ಮೇಲೆ ಒಂದು ವರ್ಷದ ವಾರಂಟಿ ಇತ್ತು. ಆದರೆ, ಕೆಲವೇ ದಿನಗಳಲ್ಲಿ ಬ್ಯಾಟರಿ ಪೂರ್ಣ ಖಾಲಿಯಾಗಿ ರಸ್ತೆ ಮಧ್ಯೆ ನಿಲ್ಲಲು ಪ್ರಾರಂಭಿಸಿತು.

ಕಂಪನಿ ಹೇಳಿದಷ್ಟು ಮೈಲೇಜ್‌ ಕೊಡುತ್ತಿರಲಿಲ್ಲ. ಈ ವಿಷಯವನ್ನು ರೋಹಿತ್‌ ಅವರು ಕಂಪನಿಗೆ ತಿಳಿಸಿದ್ದರು. ಟ್ರೈಯೋ ಕಂಪನಿಯೂ ಬೇರೆ ಬ್ಯಾಟರಿ ಕೊಟ್ಟು ಮುಂದೆ ಅದರ ಬದಲಿಗೆ ಹೊಸ ಬ್ಯಾಟರಿ ಕೊಡುವುದಾಗಿ ತಿಳಿಸಿದ್ದರು. ನಂತರ ಕೊಟ್ಟಿರುವ ಹಳೆ ಬ್ಯಾಟರಿಯೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2024ರ ಮೇ 26ರಂದು ದೂರನ್ನು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಟ್ರೈಯೋ ಗ್ರೂಪ್ಸ್‌ನಿಂದ ಸೇವಾ ನ್ಯೂನ್ಯತೆ ಆಗಿದೆ ಎಂದು ನಿರ್ಧರಿಸಿದರು. ಒಂದು ತಿಂಗಳ ಒಳಗಾಗಿ ದೂರುದಾರರ ವಾಹನಕ್ಕೆ ಹೊಸ ಬ್ಯಾಟರಿ ಅಳವಡಿಸಬೇಕು. ಒಂದು ವೇಳೆ ಅದನ್ನು ಸರಿಪಡಿಸಿಕೊಡದೇ ಇದ್ದರೆ ದೂರುದಾರರ ಪಾವತಿಸಿದ ₹91 ಸಾವಿರ ಬಡ್ಡಿಯೊಂದಿಗೆ ಮರಳಿ ಕೊಡಬೇಕು. ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ 50 ಸಾವಿರ ಪರಿಹಾರ ಮತ್ತು ₹10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಆದೇಶಿಸಿದೆ.